ಮಧೂರು ಕ್ಷೇತ್ರ ಬ್ರಹ್ಮಕಲಶೋತ್ಸವ: ಪೊಲೀಸ್ ಭದ್ರತೆ ಆಗ್ರಹಿಸಿ ಹೈಕೋರ್ಟ್‌ನಲ್ಲಿ ಅರ್ಜಿ
ಕೊಚ್ಚಿ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ಮಾರ್ಚ್ 27ರಿಂದ ಎಪ್ರಿಲ್ 7ರವರೆಗೆ ಜರಗಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲು ಪೊಲೀಸರು ಪ್ರತ್ಯೇಕ ಭದ್ರತೆ ಏರ್ಪಡಿಸಬೇಕೆಂದು ವಿನಂತಿಸಿ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಕ್ಷೇತ್ರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ನೇತೃತ್ವದಲ್ಲಿ ಉತ್ಸವಕ್ಕಾಗಿ ಸಿದ್ಧತೆಗಳು ನಡೆಯುತ್ತಿರುವಂತೆ ಶಾಂತಿ-ಸುವ್ಯವಸ್ಥೆಗೆ ಭಂಗ ಉಂಟಾಗದಂತೆ ಜಾಗ್ರತೆ ವಹಿಸಲು ಪೊಲೀಸ್ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು.
ಕೇಂದ್ರ- ರಾಜ್ಯ ಸಚಿವರು, ಸುಪ್ರಿಂ ಕೋರ್ಟ್- ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರು, ಖ್ಯಾತ ಕಲಾ-ಸಾಂಸ್ಕೃತಿಕ ನೇತಾರರು, ಸ್ವಾಮೀಜಿಯವರು ಹಾಗೂ ದೇಶ-ವಿದೇಶಗಳಿಂದ ಆಗಮಿಸುವ ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಳ್ಳುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಶಾಂತಿಯುತ ರೀತಿಯಲ್ಲಿ ನಡೆಸಲು ಬೇಕಾದ ಎಲ್ಲಾ ಕ್ರಮಗಳು ಪೊಲೀಸರ ಭಾಗದಿಂದ ಉಂಟಾಗಬೇಕೆಂದು ಅರ್ಜಿಯಲ್ಲಿ ವಿನಂತಿಸಲಾಗಿದೆ. ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯ ಚೆಂಬರಿಕದ ಸಂತೋಷ್ ಕುಮಾರ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರನ ಪರವಾಗಿ ನ್ಯಾಯ ವಾದಿ ಕೆ. ರಾಮ್ ಕುಮಾರ್ ಹಾಜರಾದರು. ಇದರಂತೆ ನ್ಯಾಯಾ ಲಯ ರಾಜ್ಯ ಗೃಹಖಾತೆಯಿಂದ ಸ್ಪಷ್ಟೀಕರಣವನ್ನು ಕೇಳಿದೆ.