ಮನೆಗೆ ನುಗ್ಗಿ ಕಾಲೇಜು ವಿದ್ಯಾರ್ಥಿಯನ್ನು ಕೊಲೆಗೈದು ರೈಲಿನಡಿ ಹಾರಿ ಆತ್ಮಹತ್ಯೆಗೈದ ಯುವಕ

ಕೊಲ್ಲಂ:  ಮನೆಯೊಳಗೆ ನುಗ್ಗಿ  ಕಾಲೇಜು ವಿದ್ಯಾರ್ಥಿಯನ್ನು ಇರಿದು ಕೊಲೆಗೈದ ಯುವಕ ನಂತರ ರೈಲಿನಡಿಗೆ ಹಾರಿ ಆತ್ಮಹತ್ಯೆಗೈದ ಘಟನೆ ಕೊಲ್ಲಂ ನಗರದಲ್ಲಿ ನಡೆದಿದೆ.

ಕೊಲ್ಲಂ ಉಳ್ಳಿಯಕೋವಿಲ್ ವಿಳಿಪುರಂ ಮಾತೃಕಾ ನಗರದ ಜೋರ್ಜ್ ಗೋಮಸ್ ಎಂಬವರ ಪುತ್ರ ಫಾತಿಮಾ ಮಾತಾ ನೇಶನಲ್ ಕಾಲೇಜಿನ ದ್ವಿತೀಯ ವರ್ಷ ಬಿಸಿಎ ವಿದ್ಯಾರ್ಥಿ ಫೆಬಿನ್ ಜೋರ್ಜ್ ಗೋಮಸ್ (21) ಕೊಲೆಗೈಯ್ಯಲ್ಪಟ್ಟ ದುರ್ದೈವಿ. ಜಿಲ್ಲಾ ಕ್ರೈಂ ಬ್ರಾಂಚ್ ವಿಭಾಗದ ಗ್ರೇಡ್ ಎಸ್‌ಐ ನೀಂಡಕರದ ಪುತ್ತ್ತನ್‌ಪುರ ತೆಕಡತ್ತ್ ರಾಜು ಎಂಬವರ ಪುತ್ರ ತೇಜಸ್ ರಾಜ್ (23) ಎಂಬಾತ ಈ ಕೊಲೆ ಪ್ರಕರಣದ ಆರೋಪಿ ಯಾಗಿದ್ದಾನೆ. ಕೊಲೆ ಬಳಿಕ ಆತ ಚೆಮ್ಮಾನ್‌ಮುಕ್ ರೈಲ್ವೇ ಓವರ್ ಬ್ರಿಡ್ಜ್ ಬಳಿ ಸಂಚರಿಸುತ್ತಿದ್ದ ರೈಲಿನಡಿಗೆ ಹಾರಿ ಆತ್ಮಹತ್ಯೆಗೈದಿದ್ದಾನೆ.

 ನಿನ್ನೆ ಸಂಜೆ ಘಟನೆ ನಡೆದಿದೆ. ಬುರ್ಖಾ ಧರಿಸಿ ಕಾರಿನಲ್ಲಿ ಫೆಬಿಯ ಮನೆಗೆ ಬಂದ ಆರೋಪಿ ತೇಜಸ್  ನುಗ್ಗಿ ಬಂದು ಫೆಬಿಯನ್ನು  ಇರಿದನೆಂದೂ ತಕ್ಷಣ ಅವನನ್ನು ಮನೆಯವರು ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ರಕ್ಷಿಸಲು ಸಾಧ್ಯವಾಗಲಿಲ್ಲ.  ಕೊಲೆ ಬಳಿಕ ತೇಜಸ್  ಬಂದ ಕಾರಿನಲ್ಲೇ ಹಿಂತಿರುಗಿ ಸುಮಾರು ೩ ಕಿ.ಮೀ. ದೂರದಲ್ಲಿರುವ ಜೆಮ್ಮಾನ್‌ಮುಕ್‌ಗೆ ಬಂದು ರೈಲಿನಡಿ ಹಾರಿ ಆತ್ಮಹತ್ಯೆಗೈದನೆಂದು ಪೊಲೀಸರು ತಿಳಿಸಿದ್ದಾರೆ. ವೈಯಕ್ತಿಕ ದ್ವೇಷವೇ ಕೊಲೆಗೆ ಕಾರಣವೆಂದು ಹೇಳಲಾಗುತ್ತಿದೆ.

RELATED NEWS

You cannot copy contents of this page