ಮಳೆನೀರು ರಸ್ತೆಯಲ್ಲಿ: ಮಲೆನಾಡು ಹೆದ್ದಾರಿ ನಾಶ ಭೀತಿ
ಸೀತಾಂಗೋಳಿ: ನಂದಾರ ಪದವುನಿಂದ ಆರಂಭಿಸಿ ತಿರುವನಂತಪುರದವರೆಗೆ ಸಾಗುವ ಮಲೆನಾಡು ಹೆದ್ದಾರಿಯಲ್ಲಿ ಚೇವಾರಿನಿಂದ ಅಂಗಡಿಮೊಗರು ತನಕ ಮಳೆ ನೀರು ಹೆದ್ದಾರಿಯಲ್ಲೇ ಹರಿಯುತ್ತಿದೆ. ಹೆದ್ದಾರಿ ಬದಿಯಲ್ಲಿ ಸೂಕ್ತ ಚರಂಡಿ ನಿರ್ಮಿಸದಿರುವುದು ಮಳೆ ನೀರು ರಸ್ತೆಯಲ್ಲೇ ಹರಿಯಲು ಕಾರಣವಾಗಿದೆ. ರಸ್ತೆಯಲ್ಲಿ ಹರಿಯುವ ನೀರು ಸಮೀಪದ ಅಂಗಡಿಗಳಿಗೂ ನುಗ್ಗುತ್ತಿದ್ದು, ಪರಿಸರದ ತಗ್ಗು ಪ್ರದೇಶಕ್ಕೆ ಹರಿದು ಮನೆ ಅಂಗಳಗಳಿಗೂ ತಲುಪುತ್ತಿದೆ. ನೀರು ಕಟ್ಟಿ ನಿಲ್ಲುವುದರಿಂದಾಗಿ ರಸ್ತೆ ಹಾನಿಗೊಳ್ಳಲು ಆರಂಭಗೊಂಡಿದೆ. ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸಿ ನೀರು ಹರಿಯಲು ವ್ಯವಸ್ಥೆ ಕೈಗೊಳ್ಳದಿದ್ದಲ್ಲಿ ಈ ಹೆದ್ದಾರಿ ನಾಶವಾಗುವುದರಲ್ಲಿ ಸಂಶಯವಿಲ್ಲವೆಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.
ಜಿಲ್ಲಾಧಿಕಾರಿ ಹಾಗೂ ವಿಜಿಲೆನ್ಸ್ ಅಧಿಕಾರಿಗಳಿಗೆ ಸ್ಥಳೀಯರು ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಉಂಟಾಗಿಲ್ಲವೆಂದು ಅವರು ಆರೋಪಿಸುತ್ತಾರೆ.