ಮಾದಕದ್ರವ್ಯ ವ್ಯವಹಾರದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ದ್ವೇಷದಿಂದ ಮನೆಗೆ ದಾಳಿ: ತಾಯಿ, ಮಗ ಗಾಯ

ಚೆರ್ಕಳ: ಮಾದಕದ್ರವ್ಯ ವ್ಯವಹಾರದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಆರೋಪಿಸಿ ಸಹೋದರರಾದ ಯುವಕರಿಬ್ಬರು ಮನೆಯೊಂದಕ್ಕೆ  ಅಕ್ರಮವಾಗಿ ನುಗ್ಗಿ ತಾಯಿ ಮತ್ತು ಮಗನ ಮೇಲೆ ಹಲ್ಲೆ ನಡೆಸಿ, ಮನೆಯ ಕಿಟಿಕಿ ಗಾಜುಗಳನ್ನು ಹೊಡೆದು ಪುಡಿಗೈದ ಘಟನೆ ನಡೆದಿದೆ.

ಮಾಸ್ತಿಕುಂಡು ಕಾಚಿಕಟ್ಟೆಯ ಸಲ್ಮಾ (64) ಮತ್ತು ಅವರ ಮಗ ಸಿನಾನ್ (32) ಎಂಬವರ ಮೇಲೆ ಹಲ್ಲೆ ನಡೆಸ ಲಾಗಿದೆ. ಅವರನ್ನು ಚೆಂಗಳ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರು ನೀಡಿದ ದೂರಿನಂತೆ ಸಹೋದರರಾದ ಚೆಂಗಳ ಬಂಬ್ರಾಣಿನಗರದ ನಿವಾಸಿಗಳಾದ ಇಬ್ಬರ ವಿರುದ್ಧ ವಿದ್ಯಾನಗರ ಪೊಲೀ ಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಮಾಸ್ತಿಕುಂಡ್ ಮತ್ತು ಪರಿಸರದಲ್ಲಿ ರಾತ್ರಿ ವೇಳೆ ಹೊರಗಿನಿಂದ ಬರುವ ತಂಡಗಳು ಮಾದಕದ್ರವ್ಯ ಮಾರಾಟ ಮಾಡುತ್ತಿರುವುದಾಗಿ ಆ ಪರಿಸರದವರು ಕೆಲವು ದಿನಗಳ ಹಿಂದೆ ಆದೂರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಆದೂರು ಪೊಲೀಸರು ಆಗಮಿಸಿ ಊರವರ ಸಹಾಯದಿಂದ ನಡೆಸಿದ ಕಾರ್ಯಾಚರಣೆ ಯಲ್ಲಿ ಎಂಡಿಎಂಎ ಮಾದಕದ್ರವ್ಯ ಸೇವಿಸಿದ ಆರೋಪದಂತೆ   ಯುವಕರಿಬ್ಬರನ್ನು ಸೆರೆಹಿಡಿದ್ದರು. ಆ ಸಂದರ್ಭ ಇನ್ನೋರ್ವ ತಪ್ಪಿಸಿಕೊಳ್ಳುವ ವೇಳೆ  ಬಿದ್ದು ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದನು. ನಂತರ ಊರವರ ಸಹಾಯದಿಂದ ಆತನನ್ನು ಆದೂರು ಪೊಲೀಸರು ಬಂಧಿಸಿದ್ದರು. ಹೀಗೆ ಪೊಲೀಸರಿಂದ ಸೆರೆಗೊಳಗಾದವರ ಪೈಕಿ ನಂತರ ಜಾಮೀನಿನಲ್ಲಿ ಬಿಡುಗಡೆಗೊಂಡ ಚೆಂಗಳ ನಿವಾಸಿ  ಉಮ್ಮರ್ ಫಾರೂಕ್ ಹಾಗೂ ಆತನ  ಸಹೋದರ ನಯಾಸ್ ನಿನ್ನೆ ಸಲ್ಮಾರ ಮನೆಗೆ ಅತಿಕ್ರಮವಾಗಿ ನುಗ್ಗಿ ಅವರ ಮತ್ತು ಮಗನ ಮೇಲೆ ಹಲ್ಲೆನಡೆಸಿ  ಮನೆ ಕಿಟಿಕಿ ಗಾಜುಗಳನ್ನು ಹೊಡೆದು ಹಾನಿಗೊಳಿಸಿದರೆಂದು ಗಾಯಾಳುಗಳು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಇದರಂತೆ ಪೊಲೀಸರು ಪ್ರಕರಣ ದಾಖಲಿಸಿ ಸಮಗ್ರ ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page