ಮಾದಕದ್ರವ್ಯ ವ್ಯಸನ: ರಾಜ್ಯದಲ್ಲಿ ಹತ್ತು ಮಂದಿಯಲ್ಲಿ ಎಚ್‌ಐವಿ ಸೋಂಕು ಪತ್ತೆ

ಕಾಸರಗೋಡು: ರಾಜ್ಯದಲ್ಲಿ ಮಾದಕದ್ರವ್ಯ ವ್ಯಸನಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಾ ಸಾಗುತ್ತಿದೆ. ಇನ್ನೊಂದೆಡೆ ಅದು ರಾಜ್ಯದ ಆರೋಗ್ಯ ರಂಗ ವಲಯದ ಮೇಲೂ  ಗಂಭೀರ ಪರಿಣಾಮ ಬೀರತೊಡಗಿದೆ. ಮಾದಕದ್ರವ್ಯ ಸೇವನೆ ಮಾತ್ರವಲ್ಲ ಮಾದಕದ್ರವ್ಯವನ್ನು ದೇಹಕ್ಕೆ ಇಂಜೆಕ್ಷನ್ ಮೂಲಕ ಚುಚ್ಚಿಸಿಕೊಳ್ಳುವವರ ಸಂಖ್ಯೆಯೂ ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ.

ಇಂತಹವರು  ಹಾಗೂ  ಇತರ ಮಾದಕವ್ಯಸನಿಗಳನ್ನು ಗುರುತಿಸಿ ಅವರ ಆರೋಗ್ಯ ತಪಾಸಣೆಗಾಗಿ ಮಲಪ್ಪುರಂ ವಳಾಂಚೇರಿಯಲ್ಲಿ  ಕೇರಳ ಏಡ್ಸ್ ಸೊಸೈಟಿ ನೇತೃತ್ವದಲ್ಲಿ ನಡೆಸಲಾದ ಸ್ಕ್ರೀನಿಂಗ್‌ನಲ್ಲಿ ಹತ್ತು   ಮಾದಕದ್ರವ್ಯ ವ್ಯಸನಿಗಳಲ್ಲಿ  ಮಾರಕ ರೋಗವಾದ ಎಚ್‌ಐವಿ  ಸೋಂಕು ಪತ್ತೆಹಚ್ಚಲಾಗಿದೆ. ಇದರಲ್ಲಿ ಓರ್ವನಿಗೆ  ಏಡ್ಸ್ ರೋಗ ತಗಲಿಕೊಂಡಿರುವುದನ್ನು ಖಚಿತಪಡಿಸಲಾಗಿದೆ. ಹೀಗೆ ಎಚ್‌ಐವಿ ಸೋಂಕು ಪತ್ತೆಯಾದ ಈ 10 ಮಂದಿಯಲ್ಲಿ ಮೂವರು ವಲಸೆ ಕಾರ್ಮಿಕರಿದ್ದಾರೆ. ಬಾಕಿ 7 ಮಂದಿ ಕೇರಳದವರಾಗಿದ್ದಾರೆ. ಇದನ್ನು ಅತೀವ ಗಂಭೀರವಾಗಿ  ಪರಿಗಣಿಸಿರುವ ಆರೋಗ್ಯ ಇಲಾಖೆ ಕೇರಳ ಏಡ್ಸ್ ಸೊಸೈಟಿ ಮೂಲಕ ನಡೆಸಲಾಗುತ್ತಿರುವ ಇಂತಹ ಸ್ಕ್ರೀನಿಂಗ್‌ನ್ನು ಇನ್ನೂ ರಾಜ್ಯದಾದ್ಯಂತ ವಿಸ್ತರಿಸಿ ಎಲ್ಲಾ ಮಾದಕವ್ಯಸನಿಗಳ ಆರೋಗ್ಯ ತಪಾಸಣೆಗೆ ಮುಂದಾಗಿದೆ. ಸಿರಿಂಜ್ ಮೂಲಕ ಮಾದಕದ್ರವ್ಯ ಚುಚ್ಚಿಸಿ  ಅಮಲೇರಿಸುವವರಲ್ಲೇ ಹೆಚ್ಚಾಗಿ ಎಚ್‌ಐವಿ ಸೋಂಕು ತಗಲುತ್ತಿದೆ. ಒಂದೇ ಸಿರಂಜ್ ಬಳಸಿ ಹಲವರು ಇಂತಹ ಮಾದಕ ಚುಚ್ಚುಮದ್ದು ಚುಚ್ಚಿಸಿಕೊಂಡಲ್ಲಿ ಎಚ್‌ಐವಿ ಸೋಂಕು ಅತೀ ಶೀಘ್ರ ಹರಡುತ್ತಿದೆ ಎಂದು ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಹೀಗೆ ವಳಾಂಚೇರಿಯಲ್ಲಿ ಎಚ್ ಐವಿ ಸೋಂಕು ಪತ್ತೆಯಾದ ಈ ಮಂದಿಯನ್ನು ಆರೋಗ್ಯ ಇಲಾಖ ವಿಶೇಷ ನಿಗಾ ಇರಿಸಿಕೊಂಡಿದೆ.  ಇತರ ಜಿಲ್ಲೆಗಳಲ್ಲ್ಲೂ ಇಂತಹ ರೋಗ ಹರಡಿದೆಯೇ ಎಂಬುವುದರ ಬಗ್ಗೆ ಆರೋಗ್ಯ ಇಲಾಖೆ ಇನ್ನೊಂದೆಡೆ ಪರಿಶೀಲಿಸತೊಡಗಿದೆ.

ವಳಾಂಚೇರಿಯಲ್ಲಿ ಕೇರಳ ಏಡ್ಸ್ ಸೊಸೈಟಿ ನಡೆಸಿದ ಸ್ಕ್ರೀನಿಂಗ್‌ನಲ್ಲಿ ಮೊದಲು ಓರ್ವನಿಗೆ ಏಡ್ಸ್ ರೋಗ  ಪತ್ತೆಯಾಗಿತ್ತು. ಅದರಿಂದ ಶಂಕೆಗೊಂಡ ಆರೋಗ್ಯ ಇಲಾಖೆ ಆ ವ್ಯಕ್ತಿಯ ಸಂಗಡಿಗರನ್ನು ಕರೆಸಿ ಅವರನ್ನು ಆರೋಗ್ಯ ತಪಾಸಣೆಗೊಳಪಡಿಸಿದಾಗ ಅವರಲ್ಲಿ ಬಳಿಕ ೯ ಮಂದಿಯಲ್ಲಿ  ಎಚ್‌ಐವಿ ಸೋಂಕು ಪತ್ತೆಯಾಗಿದೆ. ಇದನ್ನು ಅತೀವ ಗಂಭೀರ ಆರೋಗ್ಯ ಸಮಸ್ಯೆಯನ್ನಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ರಾಜ್ಯ ಏಳು ಮಂದಿ ಮಾದಕದ್ರವ್ಯ ವ್ಯಸನಿಗಳನ್ನು ಆರೋಗ್ಯ ತಪಾಸಣೆಗೆ ಮುಂದಾಗಿದೆ.

Leave a Reply

Your email address will not be published. Required fields are marked *

You cannot copy content of this page