ಮಾನಸಿಕ ಅಸ್ವಸ್ಥತೆ ಹೊಂದಿರುವ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ 167 ವರ್ಷ ಸಜೆ ಮತ್ತು 5.50 ಲಕ್ಷ ರೂ. ಜುಲ್ಮಾನೆ
ಕಾಸರಗೋಡು: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ 14ರ ಹರೆಯದ ಬಾಲಕಿಯನ್ನು ರಿಕ್ಷಾದಲ್ಲಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯಾಗಿರುವ ರಿಕ್ಷಾ ಚಾಲಕನಿಗೆ ಕಾಸರಗೋಡು ಫಾಸ್ಟ್ ಟ್ರ‍್ಯಾಕ್ ಸ್ಪೆಷಲ್ ನ್ಯಾಯಾಲಯದ ನ್ಯಾಯಾಧೀಶರಾದ ರಾಮು ರಮೇಶ್ಚಂದ್ರ ಬಾನು ಅವರು ವಿವಿಧ ಸೆಕ್ಷನ್ಗಳಲ್ಲಾಗಿ ಒಟ್ಟು 167 ವರ್ಷ ಕಠಿಣ ಸಜೆ ಹಾಗೂ 5,50,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ 22 ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.
ಚೆಂಗಳ ಪಾಣಳಂ ನಿವಾಸಿ ಉಸ್ಮಾನ್ ಅಲಿಯಾಸ್ ಉಕ್ಕಂ ಪೆಟ್ಟಿ ಉಸ್ಮಾನ್ (63) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಆರೋಪಿಗೆ ಒಂದು ಸೆಕ್ಷನ್ನಲ್ಲಿ 40 ವರ್ಷ ಕಠಿಣ ಸಜೆ ಮತ್ತು 1 ಲಕ್ಷ ರೂ. ಸೇರಿದಂತೆ ವಿವಿಧ ಸೆಕ್ಷನ್ಗಳಲ್ಲಾಗಿ ಆತನಿಗೆ ಈ ಸಜೆ ವಿಧಿ ಸಲಾಗಿದೆ. ಮಧೂರು ಪಂಚಾಯತ್ ವ್ಯಾಪ್ತಿಗೊಳಪಟ್ಟ ಬಾಲಕಿಗೆ ತಿಂಡಿ ಮತ್ತು ಚಹಾ ಕುಡಿಸುವುದಾಗಿ ನಂಬಿಸಿ ಆಕೆಯ ಮನೆಯಿಂದ ಆರೋಪಿ ತಾನು ಚಲಾಯಿಸುತ್ತಿದ್ದ ಆಟೋರಿಕ್ಷಾಕ್ಕೆ ಹತ್ತಿಸಿ ಚೆರ್ಕಳ ಬೇವಿಂಜೆ ಎಂಬಲ್ಲಿನ ಪೊದೆಗೆ ಕರೆದೊಯ್ದು ಆಕೆಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿ ಕೊಳ್ಳಲಾಗಿತ್ತು. ಅಂದು ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದ ಭಾನುಮತಿ ಸಿ. ಈ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಆ ಪ್ರಕರಣದಲ್ಲಿ ಆರೋಪಿಗೆ ಈ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆಯನ್ನು ಒಟ್ಟಿಗೆ ಅನುಭವಿಸಿದರೆ ಸಾಕೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಪ್ರೋಸಿಕ್ಯೂಷನ್ ಪರ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಿಯಾ ಎ.ಕೆ. ನ್ಯಾಯಾಲಯದಲ್ಲಿ ವಾದಿಸಿದ್ದರು.