ಮೀನು ಸಾಕಣೆ ಫಾರ್ಮ್‌ನ ಮಾಲಕನ ಮರಣದಲ್ಲಿ ನಿಗೂಢತೆ: ಮೃತದೇಹ ಇಟ್ಟಿಗೆ ಕಟ್ಟಿದ ಸ್ಥಿತಿಯಲ್ಲಿ ಪತ್ತೆ

ವೈಕಂ: ಕೋಟಯಂನಿಂದ ನಾಪತ್ತೆಯಾದ ಫಿಶ್ ಫಾರ್ಮ್ ಮಾಲಕನ ಮೃತದೇಹ ವೈಕಂ ತಲಯಾಳಂ ಕರಿಯಾಟ್‌ನಿಂದ ಪತ್ತೆಹಚ್ಚಲಾಗಿದೆ. ವೈಕಂ ತೊಟ್ಟದಲ್ಲಿ ಫಾರ್ಮ್ ನಡೆಸುವ ಟಿ.ವಿ.ಪುರಂ ಚೆಮ್ಮನತ್ತುಂಗರ ವಿಪಿನ್ ನಾಯರ್ (52) ಮೃತಪಟ್ಟವರು. ಸೋಮವಾರದಿಂದ ಇವರು ನಾಪತ್ತೆ ಯಾಗಿದ್ದರು. ಬಳಿಕ ಪೊಲೀಸರು ನಡೆಸಿದ ಹುಡುಕಾಟದಲ್ಲಿ ನಿನ್ನೆ ಸಂಜೆ 3 ಗಂಟೆಗೆ ಫಾರ್ಮ್‌ನ ಸಮೀಪದಿಂದ ಮೃತದೇಹ ಲಭಿಸಿದೆ. ಕೊಲೆಪಾತಕವಾಗಿರಬೇಕೆಂದು ಪೊಲೀಸರು ಪ್ರಾಥಮಿಕ ಶಂಕೆ ವ್ಯಕ್ತಪಡಿಸಿದ್ದಾರೆ.

ಫಾರ್ಮ್‌ನಲ್ಲಿನ ತಾತ್ಕಾಲಿಕ ಶೆಡ್‌ನಲ್ಲಿ ವಿಪಿನ್‌ರ ಹಾಸಿಗೆ ಹರಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕಾಲು ಹಾಗೂ ಕುತ್ತಿಗೆಗೆ ಇಟ್ಟಿಗೆ ಕಟ್ಟಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. ವಿಪಿನ್‌ರ ಫೋನ್ ವಾಹನದ ಕೀಲಿಕೈ ಫಾರ್ಮ್‌ನ ಸಮೀಪದಿಂದ ಪತ್ತೆಹಚ್ಚಲಾಗಿದೆ. ಮೀನುಗಳಿಗೆ ಆಹಾರ ನೀಡಲು ಹಾಗೂ ಕೊಳದಲ್ಲಿ ವಾಯು ಸಂಚಾರ ಖಚಿತಪಡಿಸಲು ವಿಪಿನ್ ರಾತ್ರಿ ಸಮಯದಲ್ಲಿ ಫಾರ್ಮ್‌ನಲ್ಲಿ ಉಳಿಯುತ್ತಿದ್ದರೆನ್ನಲಾಗಿದೆ. ಸೋಮವಾರ ಬೆಳಿಗ್ಗೆ ಪುತ್ರಿಯನ್ನು ತಿರುವನಂತಪುರಕ್ಕೆ ಬಸ್ ಹತ್ತಿಸಿ ಬಿಡಲು ತಲುಪುವುದಾಗಿ ತಿಳಿಸಿದ್ದರು. ಆದರೆ ಸಮಯ ಕಳೆದರೂ ವಿಪಿನ್ ತಲುಪಿರಲಿಲ್ಲ. ಬಳಿಕ ಪತ್ನಿ ಅನಿಲ ಹಾಗೂ ಸ್ಥಳೀಯರು ನಡೆಸಿದ ಹುಡುಕಾಟದಿಂದ ವಿಪಿನ್ ನಾಪತ್ತೆಯಾದ ಬಗ್ಗೆ ತಿಳಿದು ಬಂದಿದೆ. ಇದೇ ವೇಳೆ ಫಾರ್ಮ್‌ನಲ್ಲಿ ಸ್ಥಾಪಿಸಿರುವ ಸಿಸಿ ಟಿವಿ ಕ್ಯಾಮರಾಗಳು ಸ್ತಬ್ಧವಾಗಿರುವುದು ಪೊಲೀಸರ ತನಿಖೆಗೆ ತೊಂದರೆ ಸೃಷ್ಟಿಸಿದೆ. ಫಾರೆನ್ಸಿಕ್ ತಜ್ಞರು ಸಹಿತ ಸ್ಥಳಕ್ಕೆ ತಲುಪಿ ಬೆರಳಚ್ಚನ್ನು ಸಂಗ್ರಹಿಸಿದ್ದಾರೆ.

You cannot copy contents of this page