ಮುಳ್ಳುಹಂದಿ ಸತ್ತ ಸ್ಥಿತಿಯಲ್ಲಿ ಪತ್ತೆ: ಚಿರತೆ ದಾಳಿ ಬಗ್ಗೆ ಶಂಕೆ
ಮುಳ್ಳೇರಿಯ: ಕಳೆದ ಕೆಲವು ದಿನಗಳಿಂದ ಕಾರಡ್ಕ, ಮುಳಿಯಾರು ಪಂಚಾಯತ್ ವ್ಯಾಪ್ತಿಯಲ್ಲಿ ಚಿರತೆ ಕಂಡು ಬಂದ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಜನರು ಭೀತಿಯಲ್ಲಿರುವಾಗಲೇ ಜನವಾಸ ಪ್ರದೇಶದಲ್ಲಿ ಮುಳ್ಳು ಹಂದಿಯೊಂದು ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕಾರಡ್ಕ ಬಳಿಯ ಅಡ್ಕತ್ತೊಟ್ಟಿ ಎಂಬಲ್ಲಿ ಮುಳ್ಳು ಹಂದಿ ಸಾವಿಗೀಡಾದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಇದು ಚಿರತೆಯ ದಾಳಿಯಿಂದ ಸಾವಿಗೀಡಾಗಿರಬಹುದೇ ಎಂಬ ಸಂಶಯ ಹುಟ್ಟಿಕೊಂಡಿರುವುದಾಗಿ ನಾಗರಿಕರು ತಿಳಿಸುತ್ತಿದ್ದಾರೆ. ಇತ್ತೀಚೆಗೆ ಈ ಭಾಗದಲ್ಲಿ ಚಿರತೆ ಸಾಕು ನಾಯಿ ಮೇಲೆ ದಾಳಿ ನಡೆಸಿದ ಘಟನೆಯೂ ನಡೆದಿತ್ತು. ಇದೇ ವೇಳೆ ಕಾರಡ್ಕ 13ನೇ ಮೈಲಿನಲ್ಲಿ ಇತ್ತೀಚಿನವರೆಗೆ ಕಂಡು ಬಂದಿದ್ದ 12ರಷ್ಟು ಬೀದಿ ನಾಯಿಗಳ ಪೈಕಿ ಈಗ ಒಂದು ಮಾತ್ರವೇ ಇದೆ. ಇದು ಕೂಡಾ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ನಾಗರಿಕರು ತಿಳಿಸುತ್ತಿದ್ದಾರೆ.