ಮೇ 6ರ ತನಕ ಶಿಕ್ಷಣ ಸಂಸ್ಥೆಗಳಿಗೆ ರಜೆ, ಬಿಸಿಲ ಬೇಗೆಗೆ ರಾಜ್ಯದಲ್ಲಿ ಇನ್ನೂ ನಾಲ್ವರು ಬಲಿ
ಕಾಸರಗೋಡು: ಕೇಂದ್ರ ಹವಾಮಾನ ಇಲಾಖೆಯ ಉಷ್ಣಅಲೆ ಭೂಪಟದಲ್ಲಿ ಇದೇ ಪ್ರಥಮವಾಗಿ ಕೇರಳವನ್ನೂ ಒಳಪಡಿಸಲಾಗಿದೆ. ಈ ಭೂಪಟದಲ್ಲಿ ಕೇರಳ ಒಳಪಟ್ಟಿರುವುದಾಗಿ ರಾಜ್ಯದ ಇತಿಹಾಸದಲ್ಲೇ ಇದು ಪ್ರಥಮವಾಗಿದೆ.
ತಾಪಮಾನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳಿಗೆ ಮೇ ೬ರ ತನಕ ರಾಜ್ಯ ಸರಕಾರ ರಜೆ ಘೋಷಿಸಿದೆ. ಆದರೆ ಪೂರ್ವನಿಗದಿ ಪ್ರಕಾರ ನಿಶ್ಚಯಿಸಲಾಗಿರುವ ಪರೀಕ್ಷೆಗಳಿಗೆ ಈ ರಜೆ ಅನ್ವಯಗೊಳ್ಳುವುದಿಲ್ಲವೆಂದೂ ಸರಕಾರ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.
ರಜಾ ಅವಧಿಯಲ್ಲಿ ತರಗತಿಗಳನ್ನು ನಡೆಸುತ್ತಿರುವ ಶಾಲೆಗಳು ಬೆಳಿಗ್ಗೆ ೧೧ರಿಂದ ಅಪರಾಹ್ನ ೩ ಗಂಟೆತನಕ ತರಗತಿಗಳನ್ನು ನಡೆಸಬಾರದು. ಪೊಲೀಸರು, ಅಗ್ನಿಶಾಮಕದಳ ಮತ್ತಿತರ ಸೇವಾ ವಿಭಾಗಗಳು, ಎನ್‌ಸಿಸಿ, ಎಸ್‌ಪಿಸಿ ಹಾಗೂ ಮತ್ತಿತರ ತರಬೇತಿ ಕೇಂದ್ರಗಳಲ್ಲಿ ಹಗಲು ವೇಳೆಯ ಎಲ್ಲಾ ತರಬೇತಿ ಅಥವಾ ಪರೇಡ್‌ಗಳನ್ನೂ ಸರಕಾರ ಹೊರತುಪಡಿಸಿದೆ. ಇನ್ನೊಂದೆಡೆ ರಾಜ್ಯದಲ್ಲಿ ತಾಪಮಾನ ಮಟ್ಟ ಹೆಚ್ಚಾಗಿ ಅದು ಸೃಷ್ಟಿಸಿರುವ ಶಾಖಾಘಾತಕ್ಕೆ ರಾಜ್ಯದಲ್ಲಿ ಮತ್ತೆ ನಾಲ್ವರು ಸಾವನ್ನಪ್ಪಿದ್ದಾರೆ. ಕಲ್ಲಿಕೋಟೆ ಪಣಿಮಂಗರ ಪೈಂಟಿಂಗ್ ಕಾರ್ಮಿಕ ವಿಜೇಶ್ (೪೦), ಮಲಪ್ಪುರಂ ನಿವಾಸಿ ಮೊಹಮ್ಮದ್ ಹನೀಫ (೬೩), ಪಾಲ್ಘಾಟ್ ಮಣ್ಣಾರ್‌ಕಾಡ್‌ನ ಆರ್. ಶಬರೀಶ್ (೨೭) ಮತ್ತು ವೆಂಙರ ಪುಳಿಕ್ಕಂಪಾಡನ ಉಣ್ಣಿಕೃಷ್ಣನ್ ಎಂಬವರ ಪತ್ನಿ ಸರೋಜಿನಿ (೫೧) ಶಾಖಾಘಾತಕ್ಕೆ ಬಲಿಯಾದವರಾಗಿದ್ದಾರೆ.
ಇದರ ಹೊರತಾಗಿ ಸುಡುಬಿಸಿಲಿನಿಂದ ದೇಹದಲ್ಲಿ ಗುಳ್ಳೆ ಎದ್ದು ಹಾಗೂ ತೀವ್ರ ಅಸ್ವಸ್ಥರಾದ ಹಲವು ಮಂದಿಯನ್ನು ರಾಜ್ಯದ ವಿವಿಧ ಆಸ್ಪತ್ರೆ ಗಳಿಗಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಜ್ಯದಲ್ಲಿ ಕೆಲವೆಡೆಗಳಲ್ಲಿ ಬೇಸಿಗೆ ಮಳೆ ಸುರಿಯುತ್ತಿದೆಯಾದರೂ ಅದು ಉಷ್ಣತಾ ಮಟ್ಟವನ್ನು ಇಳಿಸಲು ಪರ‍್ಯಾಪ್ತವಾಗುತ್ತಿಲ್ಲವೆಂದು ಹವಾಮಾನ ಇಲಾಖೆ ಹೇಳಿದೆ. ತಾಪಮಾನ ಮಟ್ಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಹವಾಮಾನ ಇಲಾಖೆ ನೀಡಿರುವ ಜಾಗ್ರತಾ ನಿರ್ದೇಶವನ್ನು ಇನ್ನೂ ಅದೇ ರೀತಿ ಮುಂದುವರಿಸಲಾಗಿದೆ.