ರಕ್ತಸ್ರಾವದಿಂದ ಸಾವಿಗೀಡಾದ ಬಾಲಕಿ: ನಾಲ್ಕೂವರೆ ತಿಂಗಳ ಗರ್ಭಿಣಿ ; ತನಿಖೆ ತೀವ್ರಗೊಳಸಿದ ಪೊಲೀಸ್; ಸಹಪಾಠಿ ನಿಗಾದಲ್ಲಿ

ಕಾಸರಗೋಡು: ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹದಿನಾರರ ಹರೆಯದ ಬಾಲಕಿ ಅಪರಿಮಿತವಾಗಿ ರಕ್ತಸ್ರಾವದಿಂದಾಗಿ ಸಾವಿಗೀಡಾದ ಪ್ರಕರಣದಲ್ಲಿ ಪೊಲೀಸರು ತನಿಖ ತೀವ್ರಗೊಳಿಸಿದ್ದಾರೆ. ಶುಕ್ರವಾರ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ಆಂಬುಲೆನ್ಸ್‌ನಲ್ಲಿ ಸಾಗಿಸುತ್ತಿದ್ದಾಗ ಬಾಲಕಿ ಮೃತಪಟ್ಟಿದ್ದಾಳೆ. ಮನೆಯಲ್ಲಿ ರಕ್ತಸ್ರಾವವುಂಟಾದ ಬಾಲಕಿಯನ್ನು ಕಾಞಂಗಾಡ್‌ನ ಖಾಸಗಿ ಆಸ್ಪತ್ರೆಗೆ ತಲುಪಿಸಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಗರ್ಭಿಣಿ ಎಂದು ತಿಳಿದು ಬಂದಿತ್ತು. ಬಾಲಕಿಯ ಸ್ಥಿತಿ ಗಂಭೀರವಾಗಿದ್ದುದರಿಂದ ಮಂಗಳೂರಿನ ಆಸ್ಪತ್ರೆಗೆ ತಲುಪಿಸಲು ವೈದ್ಯರು ಸೂಚಿಸಿದ್ದರು. ಆದರೆ ಮಂಗಳೂರಿಗೆ ತಲುಪುವ ಮೊದಲೇ ಸಾವು ಸಂಭವಿಸಿತ್ತು. ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿ ನಾಲ್ಕೂವರೆ ತಿಂಗಳ ಗರ್ಭಿಣಿಯೆಂದು ದೃಢೀಕರಿಸಲಾಗಿದೆ. ಅಪರಿಮಿತ ರಕ್ತಸ್ರಾವಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ. ಗರ್ಭಛಿದ್ರಕ್ಕೆ  ಯಾವುದಾದರೂ ಔಷಧಿ ಸೇವಿಸಿದ್ದಳೇ ಎಂಬ ಸಂಶಯ ತೀವ್ರಗೊಂಡಿದೆ.  ಈ ಬಗ್ಗೆ ದೃಢೀಕರಿ ಸಬೇಕಾದರೆ ರಾಸಾಯನಿಕ ತಪಾಸಣಾ ವರದಿ ಲಭಿಸಬೇಕಾಗಿದೆ ಯೆಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಪೊಲೀಸರಲ್ಲಿ ತಿಳಿಸಿದ್ದಾರೆ.  ಘಟನೆ ಸಂಬಂಧಿಸಿ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ. ಇದೇ ವೇಳೆ ಬಾಲಕಿ ಗರ್ಭಧರಿಸಲು ಕಾರಣನಾದ ಸಹಪಾಠಿಯೋರ್ವ  ಪೊಲೀಸರ ನಿಗಾದಲ್ಲಿದ್ದಾನೆಂದು ತಿಳಿದುಬಂದಿದೆ.

You cannot copy contents of this page