ರಸ್ತೆ ಬದಿ ತ್ಯಾಜ್ಯ ಉಪೇಕ್ಷೆ: ದುರ್ವಾಸನೆ, ನಾಯಿಗಳ ಕಾಟದಿಂದ ಸ್ಥಳೀಯರಿಗೆ ಆತಂಕ
ಉಪ್ಪಳ: ವಿವಿಧೆಡೆಗಳಿಂದ ತ್ಯಾಜ್ಯ ತಂದು ರಸ್ತೆ ಬದಿಗಳಲ್ಲಿ ಉಪೇಕ್ಷಿಸುತ್ತಿ ರುವುದು ವ್ಯಾಪಕಗೊಂಡಿದ್ದು, ಇದು ವಾಹನ ಸಂಚಾರಕ್ಕೆ, ಸ್ಥಳೀಯರಿಗೆ ದುರ್ವಾಸನೆಯಿಂದ ಸಮಸ್ಯೆ ಸೃಷ್ಟಿಸುತ್ತಿದೆ. ಕೈಕಂಬ ಬಾಯಾರು ರಸ್ತೆಯ ಬೇಕೂರು ವಿದ್ಯುತ್ ಸಬ್‌ಸ್ಟೇಷನ್ ಪರಿಸರದ ರಸ್ತೆ ಬದಿಯಲ್ಲಿ ಕಳೆದ ಹಲವು ತಿಂಗಳುಗಳಿಂದ ಪ್ಲಾಸ್ಟಿಕ್ ಚೀಲದಲ್ಲಿ ಆಹಾರ ತ್ಯಾಜ್ಯ ತಂದು ಉಪೇಕ್ಷಿಸಲಾಗುತ್ತಿದೆ. ಒಂದೆಡೆ ದುರ್ವಾಸನೆ ಹಾಗೂ ಇನ್ನೊಂದೆಡೆ ಬೀದಿ ನಾಯಿಗಳ ಕಾಟದಿಂದಾಗಿ ಈ ಪ್ರದೇಶದಲ್ಲಿ ಸಂಚಾರವೇ ಸಮಸ್ಯೆಗೀಡಾಗಿದೆ. ನಾಯಿಗಳು ಗುಂಪುಗುಂಪಾಗಿ ಬಂದು ಆಹಾರಕ್ಕಾಗಿ ಕಚ್ಚಾಡುತ್ತಿದ್ದು, ಇದರಿಂದ ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು ಆತಂಕಗೊಂಡಿದ್ದಾರೆ. ನಾಯಿಗಳು ಆಹಾರ ತಿನ್ನುವ ವೇಳೆ ಈ ದಾರಿಯಾಗಿ ತೆರಳುವವರನ್ನು ಅಟ್ಟಾಡಿಸಿಕೊಂಡು ಹೋಗುತ್ತಿರುವುದಾಗಿ ದೂರಲಾಗಿದೆ. ಈ ಪರಿಸರದಲ್ಲಿ ಸಿಸಿ ಕ್ಯಾಮರಾ ಸ್ಥಾಪಿಸಿ ರಾತ್ರಿ ವೇಳೆ ತ್ಯಾಜ್ಯಗಳನ್ನು ತಂದು ಉಪೇಕ್ಷಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.