ರಾಜ್ಯದಲ್ಲಿ ಕುಸಿದ ಮತದಾನ: ರಾಜಕೀಯ ಪಕ್ಷಗಳಲ್ಲಿ ಮನೆ ಮಾಡಿದ ಆತಂಕ
ಕಾಸರಗೋಡು: ರಾಜ್ಯದಲ್ಲಿ ನಿನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾನ ಶೇಕಡಾವಾರು ಕುಸಿದಿದ್ದು ಅದು ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಆತಂಕ ಮನೆ ಮಾಡತೊಡಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ. 77.67ರಷ್ಟು ಮತದಾನ ನಡೆದರೆ, ಅದು ಈ ಬಾರಿ ಶೇ. 71.16ಕ್ಕೆ ಕುಸಿದಿದೆ. ಆದರೆ ಮನೆಗಳಲ್ಲಿ ನಡೆದ ಮತದಾನ ಮತ್ತು ಅಂಚೆಮತಗಳ ಮತಎಣಿಕೆ ಈಗಲಷ್ಟೇ ನಡೆಯುತ್ತಿದ್ದು, ಅದರ ಫಲಿತಾಂಶ ಹೊರ ಬಂದ ಬಳಿಕ ಮತದಾರ ಶೇಕಡಾವಾರಿನಲ್ಲಿ ಬದಲಾವಣೆ ಉಂಟಾಗಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.
2019ರಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಶೇ. 80.65ರಷ್ಟು ಮತದಾನ ನಡೆದಿದ್ದು, ಅದು ಈ ಬಾರಿ 75.29 ಆಗಿ ಕುಸಿದಿದೆ.
ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಎಂಬAತೆ ಪಯ್ಯನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ. 80.30ರಷ್ಟು ಮತದಾನ ನಡೆದಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಶೇಕಡಾವಾರಿನಲ್ಲಿ ಕಳೆದ ಬಾರಿಗಿಂತಲೂ ಈ ಬಾರಿ ಶೇ. 3ರಷ್ಟು ಏರಿಕೆ ಉಂಟಾಗಿದ್ದು, ಇದು ಬಿಜೆಪಿ ವಲಯದಲ್ಲಿ ಹೆಚ್ಚಿನ ಆವೇಶ ಮೂಡಿಸಿದೆ.
1977ರಲ್ಲಿ ಶೇ. 79.20, 1980 ರಲ್ಲಿ ಶೇ. 62.61, 1984 ರಲ್ಲಿ ಶೇ. 77.13, 1989ರಲ್ಲಿ 79.30, 1997ರಲ್ಲಿ 73.32, 1996ರಲ್ಲಿ 71.11, 1998ರಲ್ಲಿ 70.14, 1999ರಲ್ಲಿ 69.71, 2004- 71.67, 2009- 73.38, 2014- 74.02 ಮತ್ತು 2019ರಲ್ಲಿ ಶೇ. 77.84 ಮತದಾನ ನಡೆದಿತ್ತು.