ರಾಜ್ಯದಲ್ಲೂ ವಖ್ಫ್ ವಿವಾದ: 614 ಕುಟುಂಬಗಳು ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿ
ತಿರುವನಂತಪುರ: ದೇಶದ ಹಲವು ರಾಜ್ಯಗಳಲ್ಲಿ ತಲೆಯೆತ್ತಿರುವ ವಖ್ಫ್ ವಿವಾದ ಇದೀಗ ಕೇರಳದಲ್ಲೂ ತಲೆಯೆತ್ತಿದೆ. ವಖ್ಫ್ ಕಾಯ್ದೆಯಿಂದ ಕೊಚ್ಚಿ ಸಮೀಪದ ಮುನಂಬಂನ ಗ್ರಾಮದ 614 ಕುಟುಂಬಗಳು 464 ಎಕ್ರೆಯಷ್ಟು ಪೂರ್ಣ ಆಸ್ತಿಯನ್ನು ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಹೀಗಾಗಿ ಮುನಂಬಂ ಹಾಗೂ ಅಕ್ಕಪಕ್ಕದ ಕೆಲ ಗ್ರಾಮಗಳ ಈ ಕುಟುಂಬಗಳು ಬೀದಿಗಿಳಿದು ಪ್ರತ್ಯಕ್ಷ ಹೋರಾಟ ಆರಂಭಿಸಿವೆ. ವಿವಾದಿತ ವಖ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರ ಸರಕಾರದ ವಿರುದ್ಧ ಧ್ವನಿ ಎತ್ತಿರುವ ಆಡಳಿತ ರೂಢ ಎಡರಂಗ ಮತ್ತು ವಿರೋಧ ಪಕ್ಷಗಳ ಒಕ್ಕೂಟವಾದ ಯುಡಿಎಫ್, ವಿವಾದಿತ ಜಮೀನು ವಖ್ಫ್ ಮಂಡಳಿಗೆ ಸೇರಿಲ್ಲವೆಂದು ಒಂದೆಡೆ ಹೇಳುತ್ತಿದ್ದರೂ, ಜನರ ಪ್ರತಿಭಟನೆಗೆ ಕೈ ಜೋಡಿಸದೆ ದೂರವಾಗಿ ಉಳಿದುಕೊಂಡಿವೆ. ಬಿಜೆಪಿ ಮಾತ್ರವೇ ಈ ಹೋರಾಟಕ್ಕೆ ಬೆಂಬಲ ನೀಡುತ್ತಿದೆ. ಮತ್ತೊಂಡೆದೆ ಜಮೀನು ಕಳೆದುಕೊಳ್ಳುವ ಭೀತಿಯಲ್ಲಿರುವ ಕ್ರೈಸ್ತ ಸಮಯದ ನೆರವಿಗೆ ಸ್ಥಳೀಯ ಚರ್ಚೆಗಳೂ, ಹೋರಾಟಕ್ಕೆ ಬೆಂಬಲ ನೀಡಿದ್ದು, ಆ ಮೂಲಕ ಕೇಂದ್ರ ಸರಕಾರದ ವಖ್ಫ್ ಮಂಡಳಿ ತಿದ್ದುಪಡಿ ಕಾನೂನಿಗೆ ಬೆಂಬಲ ನೀಡಿದೆ.
ವಿವಾದಿತ ಮುನಂಬಂ ಗ್ರಾಮದ 464 ಎಕ್ರೆಯಷ್ಟು ಭೂಮಿ ನಮಗೆ ಸೇರಿದ್ದೆಂದು 2019ರಲ್ಲಿ ವಖ್ಫ್ ಮಂಡಳಿ ಘೋಶಿಸಿದೆ. ಆ ವಿವಾದ ನಂತರ ನ್ಯಾಯಾಲಯದ ಮೆಟ್ಟಿಲೇರಿದೆ. ಅದಾದ ಬಳಿಕ ಆ ನಿಯಮದ ಅನ್ವಯ ಪಂಚಾಯತ್ ವ್ಯಾಪ್ತಿಯಲ್ಲಿ ಜನರಿಂದ ಆಸ್ತಿ ತೆರಿಗೆ ಸಂಗ್ರಹಿಸದಂತೆ ತಡೆಯಾಜ್ಞೆಯೂ ಬಂತು. ಇದರ ಪರಿಣಾಮ ಈ ಪ್ರದೇಶದ ಜನತೆಗೆ ತಮ್ಮ ಆಸ್ತಿಗೆ ತೆರಿಗೆಯನ್ನು ಪಾವತಿಸಲು ಸಾಧ್ಯವಾಗದೆ ಯಾವುದೇ ಸಮಯದಲ್ಲಿ ತಮ್ಮ ಆಸ್ತಿಗಳನ್ನೆಲ್ಲಾ ಕಳೆದು ಬೀದಿ ತಲುಪುವ ಭೀತಿ ಈಗ ಎದುರಿಸುತ್ತಿದ್ದಾರೆ. ಹೀಗಾಗಿ ಈಗ ಇರುವ ವಖ್ಫ್ ಕಾಯ್ದೆ ರದ್ದುಪಡಸಿ ಕಾನೂನು ಬದ್ದವಾಗಿ ತಾವು ಖರೀದಿಸಿದ ಆಸ್ತಿಯನ್ನು ತಮಗೇ ಉಳಿಸಿಕೊಡಿ ಎಂದು ಈ ಹೋರಾಟಗಾರರು ಆಗ್ರಹಿಸಿದ್ದಾರೆ.
ವಖ್ಫ್ ಭೂಮಿ ವಿವಾದ ತೀವ್ರಗೊಳ್ಳುತ್ತಿರುವಂತೆಯೇ ಆ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಶೇಷ ಸಭೆ ಕರೆದಿದ್ದಾರೆ. ಉಪ ಚುನಾವಣೆಯ ಬಳಿಕ 16ರಂದು ಆನ್‌ಲೈನ್ ಮೂಲಕ ಮುಖ್ಯಮಂತ್ರಿ ಸಭೆ ಕರೆದಿದ್ದು, ಅದರಲ್ಲಿ ವಖ್ಫ್ ಖಾತೆ ಸಚಿವ ಎ. ಅಬ್ದುಲ್ ರಹಿಮಾನ್ ಮತ್ತು ವಖ್ಫ್ ಮಂಡಳಿ ಅಧ್ಯಕ್ಷರೂ ಸೇರಿದಂತೆ ಸಂಬಂಧಪಟ್ಟ ಎಲ್ಲರೂ ಭಾಗವಹಿಸುವರು.
ಹೋರಾಟಕ್ಕೆ ಕೇಂದ್ರ ಸಚಿವ ಸುರೇಶ್ ಗೋಪಿಯವರೂ ಬೆಂಬಲ ಘೋಷಿಸಿದ್ದಾರೆ. ಈ ವಿಷಯವನ್ನು ನಾನು ಸಂಸತ್ತಿನಲ್ಲೂ ಎತ್ತುವೆ. ಈ ಹೋರಾಟವನ್ನು ಸುದ್ಧಿಮಾಧ್ಯಮಗಳು ಅವಗಣಿಸುತ್ತಿದೆ ಎಂದೂ ಅವರು ಹೇಳಿದ್ದಾರೆ. ಈ ವಿಷಯ ಇನ್ನೇನು ಮತೀಯ ಸಮಸ್ಯೆ ಸೃಷ್ಟಿಗೆ ದಾರಿಮಾಡಿ ಕೊಡುವ ಮೊದಲಾಗಿ ಅದಕ್ಕೆ ಕಾನೂನು ಪರ ಪರಿಹಾರ ಕೈಗೊಳ್ಳಲು ಸರಕಾರ ಮುಂದಾಗಬೇಕೆಂದು ಇನ್ನೊಂದೆಡೆ ಮುಸ್ಲಿಂ ಲೀಗ್ ನೇತಾರ ಪಾಣಕ್ಕಾಡ್ ಸಾಧಿಕಲಿ ಶಿಹಾಬ್ ತಂಙಳ್ ಆಗ್ರಹಪಟ್ಟಿದ್ದಾರೆ.