ರಾಜ್ಯದ ಪ್ರಥಮ ಜರ್ನಲಿಸ್ಟ್ ಹಗ್ಗಜಗ್ಗಾಟ ಚಾಂಪಿಯನ್‌ಶಿಪ್ ನಾಳೆ

ಕಾಸರಗೋಡು: ಕಾಸರಗೋಡು ಪ್ರೆಸ್ ಕ್ಲಬ್ ಹಾಗೂ ಬೋಬಿ ಇಂಟರ್ ನ್ಯಾಷನಲ್ ಗ್ರೂಪ್‌ನ ಜಂಟಿ ಆಶ್ರಯದಲ್ಲಿ ರಾಜ್ಯದಲ್ಲಿ ಇದೇ ಪ್ರಥಮವಾಗಿ ನಡೆಯುವ ರಾಜ್ಯ ಮಟ್ಟದ ಜರ್ನಲಿಸ್ಟ್ (ಪತ್ರಕರ್ತ) ಹಗ್ಗ- ಜಗ್ಗಾಟ ಚಾಂಪಿಯನ್ ಶಿಪ್ ಸ್ಪರ್ಧೆ ನಾಳೆ ಕಾಸರಗೋಡು ಪ್ರೆಸ್‌ಕ್ಲಬ್ ಬಳಿಯಲ್ಲೇ ವಿಶೇಷವಾಗಿ ಸಿದ್ಧಪಡಿಸಲಾದ ವೆಲ್ ಫಿಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

ನಾಳೆ ಸಂಜೆ ೫ ಗಂಟೆಗೆ ಈ ಟೂರ್ನಿ ಆರಂಭಗೊಳ್ಳಲಿದೆ. ಮೊದಲು ರಾಜ್ಯದ ಪ್ರೆಸ್‌ಕ್ಲಬ್‌ಗಳು ಮತ್ತು ಕೇರಳ ಕಾರ್ಯನಿರತ ಪತ್ರಕರ್ತರ ಸಂಘಟನೆ  (ಕೆಯುಡಬ್ಲ್ಯುಜೆ) ನಡುವೆ ಸ್ಪರ್ಧೆ ನಡೆಯಲಿದೆ. ಬಳಿಕ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳ ಖ್ಯಾತ  ತಂಡಗಳ ಸ್ಪರ್ಧೆ ನಡೆಯಲಿದೆ. ಡಿವೈಎಫ್‌ಐ, ಭಾರತೀಯ ಜನತಾ ಯುವಮೋರ್ಚಾ, ಯೂತ್ ಲೀಗ್,  ಮತ್ತು ಎಐವೈಎಫ್‌ನ ತಂಡಗಳೂ ಇದರಲ್ಲಿ ಭಾಗವಹಿಸಲಿದೆ. ಈ ಟೂರ್ನಿಯನ್ನು ಯಶಸ್ವಿಗೊಳಿಸಲು ಅಗತ್ಯದ ಎಲ್ಲಾ ಸಿದ್ಧತೆಗಳನ್ನು ಈಗಾಗಲೇ ನಡೆಸಲಾಗಿದೆ ಎಂದು ಕಾಸರಗೋಡು ಪ್ರೆಸ್‌ಕ್ಲಬ್ ಅಧ್ಯಕ್ಷ ಸಿಜು ಕಣ್ಣನ್, ಕಾರ್ಯದರ್ಶಿ ಪ್ರದೀಪ್ ನಾರಾಯಣನ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಉದ್ಘಾಟನಾ ಸಮಾರಂಭದಂಗ ವಾಗಿ ಸಿನೆಮಾ ತಾರೆಗಳು ಮತ್ತು ಜಿಲ್ಲೆಯ ಶಾಸಕರು ಒಳಗೊಂಡ ಜನಪ್ರತಿ ತಂಡಗಳ ನಡುವೆ ಸೌಹಾರ್ದ ಹಗ್ಗ-ಜಗ್ಗಾಟ ಸ್ಪರ್ಧೆಯೂ ನಡೆಯಲಿದೆ. ರಾಜ್ಯ ಮಟ್ಟದ ಈ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಒಂದರಿಂದ ನಾಲ್ಕರ ತನಕ ಸ್ಥಾನ ಪಡೆಯುವ ತಂಡಗಳಿಗೆ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದು. ಇನ್ನು ಉತ್ತರ ವಲಯದ ಸ್ಪರ್ಧೆಗಳ ಪೈಕಿ ಮೊದಲ ಎಂಟು ಸ್ಥಾನ ಪಡೆದ ತಂಡಗಳಿಗೂ ನಗದು ಬಹುಮಾನ ನೀಡಲಾಗುವುದು. ಈ ಕಾರ್ಯಕ್ರಮದ ಯಶಸ್ವಿಗಾಗಿ  ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷರಾಗಿರುವ ಸಂಘಟನಾ ಸಮಿತಿಗೂ ರೂಪು ನೀಡಲಾಗಿದೆ. ಹಗ್ಗಜಗ್ಗಾಟ ಅಸೋಸಿಯೇಶನ್‌ನ ಪದಾಧಿಕಾರಿಗಳು ಒಳಗೊಂಡ ಸಮಿತಿ ಈ ಸ್ಪರ್ಧೆಯನ್ನು ನಿಯಂತ್ರಿಸಲಿದೆ.

Leave a Reply

Your email address will not be published. Required fields are marked *

You cannot copy content of this page