ರಾಷ್ಟ್ರೀಯ ಹೆದ್ದಾರಿ ಉಪ್ಪಳ ಗೇಟ್‌ನಲ್ಲಿ ನಿರಂತರ ಅಪಘಾತ: ಶಾಶ್ವತ ಪರಿಹಾರಕ್ಕೆ ಶಾಸಕ ಪತ್ರ ರವಾನೆ
ಉಪ್ಪಳ: ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ ಪೂರ್ತಿಗೊಂಡಾಗ ಉಪ್ಪಳ ಗೇಟ್‌ನಲ್ಲಿ ಅಪಘಾತಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇಲ್ಲಿ ಅಪಘಾತ ಸಾಧ್ಯತೆಯನ್ನು ಇಲ್ಲದಂತೆ ಮಾಡಲು ತುರ್ತಾಗಿ ಶಾಶ್ವತ ಪರಿಹಾರ ಉಂಟಾಗಬೇಕೆಂದು ಆಗ್ರಹಿಸಿ ಶಾಸಕ ಎಕೆಎಂ ಅಶ್ರಫ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರೀಜ್ಯನಲ್ ಆಫೀಸರ್‌ಗೆ ಪತ್ರ ರವಾನಿಸಿದ್ದಾರೆ.
ಉಪ್ಪಳ ಗೇಟ್‌ನಲ್ಲಿ ಸರಣಿ ಅಪಘಾತಗಳ ಬಗ್ಗೆ ಪ್ರಥಮ ಹಂತದಲ್ಲೇ ಜಿಲ್ಲಾ ಅಭಿವೃದ್ಧಿ ಸಮಿತಿಯಲ್ಲಿ ವರದಿ ಮಂಡಿಸಿದ್ದು, ಆ ಬಳಿಕ ಇಲ್ಲಿ ೭ ಎಂ.ಎಂ. ದಪ್ಪದ ಹಳದಿ ಥರ್ಮೋ ಪ್ಲಾಸ್ಟಿಕ್ ಸ್ಟ್ರಿಪ್ ಸ್ಥಾಪಿಸಿದ್ದು, ಎಲ್‌ಎಚ್‌ಎಸ್, ಆರ್‌ಎಚ್‌ಎಸ್ ಮೈನ್ ಕ್ಯಾರೇಜ್ ವೇ ಆರಂಭಿಸಿರುವು ದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿತ್ತು. ಆದರೂ ಅಪಘಾತಗಳು ಕಡಿಮೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ನಾಜೂಕಾಗಿರುವ ಸ್ಥಳಗಳಲ್ಲಿ ಡಾಮರು ಬದಲಿಸಿ ಅಥವಾ ಇತರ ವಿಧಾನಗಳಿಂದ ಅಪಘಾತ ಸಂಭವಿಸುವುದನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಶಾಸಕರು ಪತ್ರದಲ್ಲಿ ಆಗ್ರಹಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಯವರ ಉಪಸ್ಥಿತಿಯಲ್ಲಿ ಸಭೆಯೊಂದನ್ನು ಆಯೋಜಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗೂ ಶಾಸಕರು ಪತ್ರ ನೀಡಿದ್ದಾರೆ.