ವರ್ಕಾಡಿಯಲ್ಲಿ ಆರಾಧನಾಲಯಗಳು, ಅಂಗಡಿಯಿಂದ ಕಳವು
ಮಂಜೇಶ್ವರ: ವರ್ಕಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಎರಡು ಆರಾಧನಾಲಯಗಳು ಹಾಗೂ ಅಂಗಡಿಯಿಂದ ಕಳವು ನಡೆದಿದೆ. ಕೇರಳ ಗಡಿ ಪ್ರದೇಶವಾದ ಮಲೆನಾಡ ಹೆದ್ದಾರಿ ಮುಡಿಪು ರಸ್ತೆಯ ಬಜಿಲಕರಿಯ ಎಂಬಲ್ಲಿನ ಬಾಲಯೇಸು ಪ್ರಾರ್ಥನಾ ಮಂದಿರ, ಪಾವಳದಲ್ಲಿ ಶ್ರೀ ಕೊರಗಜ್ಜ ಕಟ್ಟೆಯ ಕಾಣಿಕೆಹುಂಡಿ ಹಾಗೂ ಮೂರುಗೋಳಿ ಸಮೀಪ ಪಾಡಿ ಎಂಬಲ್ಲಿ ಬಶೀರ್ ಎಂಬವರ ರಬಾ ಜನರಲ್ ಸ್ಟೋರ್‌ನಿಂದ ಕಳ್ಳರು ಹಣ ದೋಚಿದ್ದಾರೆ.
ಬಾಲಯೇಸು ಪ್ರಾರ್ಥನಾ ಮಂದಿರದ ಬೀಗ ಮುರಿದು ಎರಡು ಕಾಣಿಕೆ ಹುಂಡಿಗಳಲ್ಲಿದ್ದ ಸುಮಾರು ಎರಡು ಸಾವಿರ ರೂಪಾಯಿ ದೋಚಲಾಗಿದೆ. ಕೊರಗಜ್ಜ ಕಟ್ಟೆಯ ಕಾಣಿಕೆ ಹುಂಡಿಯಿಂದ ಸುಮಾರು ಎರಡು ಸಾವಿರ ರೂಪಾಯಿ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಅದೇ ರೀತಿ ರಬಾ ಜನರಲ್ ಸ್ಟೋರ್‌ನ ಡ್ರವರ್ ಹಾಗೂ ಕಾಣಿಕೆ ಹುಂಡಿಯಿಂದ 10 ಸಾವಿರ ರೂ. ನಗದು ಹಾಗೂ ಒಂದು ಮೊಬೈಲ್ ಫೋನ್ ಕಳವಿಗೀಡಾಗಿದೆ. ಮೊನ್ನೆ ರಾತ್ರಿ ಅಥವಾ ನಿನ್ನೆ ಮುಂಜಾನೆ ಈ ಮೂರು ಕಳವುಕೃತ್ಯಗಳು ನಡೆದಿದೆ ಯೆಂದು ಅಂದಾಜಿಸಲಾಗಿದೆ. ಪ್ರಾರ್ಥನಾ ಮಂದಿರದಲ್ಲಿ ನಡೆದ ಕಳವು ಬಗ್ಗೆ ವರ್ಕಾಡಿ ಚರ್ಚ್‌ನ ಪಾಲನಾ ಮಂಡಳಿ ಉಪಾಧ್ಯಕ್ಷ ರಾಜೇಶ್ ಡಿ’ಸೋಜಾ, ಕೊರಗಜ್ಜ ಕಟ್ಟೆಯ ಕಾಣಿಕೆ ಹುಂಡಿ ಕಳವಿಗೀಡಾದ ಬಗ್ಗೆ ಕೊರಗಜ್ಜ ಕಟ್ಟೆ ಸಮಿತಿ ಸದಸ್ಯ ಪುಷ್ಪರಾಜ್ ಎಂಬಿವರು ಪೊಲೀಸರಿಗೆ ದೂರು ನೀಡಿದ್ದಾರೆ. ಕಳವು ನಡೆದ ಸ್ಥಳಗಳಿಗೆ ಮಂಜೇಶ್ವರ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನದಳ ತಲುಪಿ ಪರಿಶೀಲನೆ ನಡೆಸಿದ್ದಾರೆ. ಪ್ರಾರ್ಥನಾ ಮಂದಿರದ ಸಿಸಿ ಕ್ಯಾಮರಾದಲ್ಲಿ ಹೆಲ್ಮೆಟ್ ಧರಿಸಿದ ಓರ್ವ ವ್ಯಕ್ತಿಯ ದೃಶ್ಯ ಪತ್ತೆಯಾ ಗಿರುವುದಾಗಿ ತಿಳಿದುಬಂದಿದೆ.
ಕಳೆದ ತಿಂಗಳ 21ರಂದು ವರ್ಕಾಡಿಯಲ್ಲಿ ಚರ್ಚ್ ಹಾಗೂ ಮೀಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದಿಂದ ಕಾಣಿಕೆಹುಂಡಿ ಕಳವು ನಡೆದಿತ್ತು.