ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕಾಡಿನಿಂದಾವೃತ: ರಸ್ತೆ ಬದಿಯಲ್ಲಿ ನಡೆದಾಡಲಾಗದ ಸ್ಥಿತಿ
ಮಂಜೇಶ್ವರ: ಮಂಜೇಶ್ವರ ಪಂಚಾಯತ್ 12ನೇ ವಾರ್ಡ್ ಶಾಂತಿನಗರದಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಹುಲ್ಲು, ಪೊದೆಗಳಿಂದ ಆವೃತಗೊಂಡಿದ್ದು, ಭಯ ಹುಟ್ಟಿಸುತ್ತಿದೆ. ವಿದ್ಯುತ್ ಮೊಟಕುಗೊಂಡರೆ ಸ್ಥಳೀಯ ನಿವಾಸಿಗಳು ಫ್ಯೂಸ್ ಹಾಕುತ್ತಿದ್ದರು. ಇದೀಗ ಅದು ಸಾಧ್ಯವಾಗದಂತಾಗಿದೆಯೆಂದು ದೂರಲಾಗಿದೆ.
ಇಲ್ಲಿನ ಹಿಲ್ ಸೈಡ್‌ನಿಂದ ಚೆಕ್‌ಪೋಸ್ಟ್ ವರೆಗೆ ಮತ್ತು ಒಳ ರಸ್ತೆಯಲ್ಲಿ ರಸ್ತೆಯ ಎರಡೂ ಕಡೆ ಕಾಡು ಪೊದೆ ತುಂಬಿಕೊಂಡಿದೆ. ಈ ಪ್ರದೇಶದಲ್ಲಿ ಕಾಡು ಹಂದಿಗಳು, ವಿಷ ಜಂತುಗಳೂ ಕೂಡಾ ವ್ಯಾಪಕಗೊಂಡಿವೆ. ಇದರಿಂದ ಮದ್ರಸ, ಶಾಲೆ ವಿದ್ಯಾರ್ಥಿಗಳು ನಡೆದಾಡಲು ಭಯಪಡುತ್ತಿದ್ದಾರೆ. ರಸ್ತೆ ಬದಿಯ ಕಾಡು ಸವರಲು ಪ್ರತೀ ವಾರ್ಡ್‌ಗೆ ಹಣ ಮಂಜೂರುಗೊಂಡಿರುವುದಾಗಿ ತಿಳಿದು ಬಂದಿದ್ದು, ಹಾಗಿರುವಾಗ ಈ ಭಾಗಕ್ಕೆ ಗಮನ ಹರಿಸದಿರಲು ಕಾರಣವೇನೆಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಇತ್ತ ಗಮನ ಹರಿಸಬೇಕೆಂದೂ ಅವರು ಒತ್ತಾಯಿಸಿದ್ದಾರೆ.