ವಿದ್ಯುತ್ ಶಾಕ್ ತಗಲಿ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ: ರಾಜ್ಯದ ಶಾಲೆಗಳ ಭದ್ರತೆಗೆ ಕಟ್ಟು ನಿಟ್ಟಿನ ಕ್ರಮ
ತಿರುವನಂತಪುರ: ಕೊಲ್ಲಂ ತೇವಲಕ್ಕರ ಬೋಯ್ಸ್ ಹೈಸ್ಕೂಲ್‌ನ ಎಂಟನೇ ತರಗತಿ ವಿದ್ಯಾರ್ಥಿ ಕೊಲ್ಲಂ ಪಡಿಞ್ಞಾರೆ ಕಲ್ಲಡ ನಿವಾಸಿ ಮಿಥುನ್ ಮನು (13) ಶಾಲೆಯಲ್ಲಿ ವಿದ್ಯುತ್ ಸ್ಪರ್ಶಿಸಿ ದಾರುಣವಾಗಿ ಸಾವನ್ನಪ್ಪಿದ ಘಟನೆಯ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಶಾಲೆಗಳ ಭದ್ರತೆಗಾಗಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಅಧ್ಯಕ್ಷತೆಯಲ್ಲ್ಲಿ ನಡೆದ ಉನ್ನತ ಮಟ್ಟದ ಸಭೆ ತೀರ್ಮಾನಿಸಿದೆ. ಶಾಲೆಗಳಲ್ಲಿ ಅದೇನೇ ನಡೆದರೂ ನಮಗೆ ವೇತನ ಲಭಿಸಲಿದೆಯೆಂಬ ಅಧ್ಯಾಪಕರ ಹಾಗೂ ಇತರ ಸಿಬ್ಬಂದಿಗಳ ಮನೋ ಭಾವವನ್ನು ಅಂಗೀಕರಿಸುವಂತಿಲ್ಲ ವೆಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ವಿದ್ಯಾರ್ಥಿಯ ಸಾವಿನ ಹಿನ್ನೆಲೆಯಲ್ಲಿ ತೇವಲಕ್ಕರ ಶಾಲೆಯ ಮುಖ್ಯೋಪಾಧ್ಯಾಯಿನಿಯನ್ನು ಸೇವೆಯಿಂದ ಈಗಾಗಲೇ ಅಮಾನತುಗೊಳಿಸಲಾಗಿದೆ. ಮಾತ್ರವಲ್ಲ ಈ ವಿಷಯದಲ್ಲಿ ಶಾಲಾ ಆಡಳಿತ ಸಮಿತಿಗೆ ಸ್ಪಷ್ಟೀಕರಣೆ ನೀಡುವಂತೆ ನೋಟೀಸನ್ನು ಜ್ಯಾರಿಗೊಳಿಸಲಾಗಿದೆ.
ಈ ಶಾಲೆ ಸಿಪಿಎಂ ನಿಯಂತ್ರಣದಲ್ಲಿರುವ ಆಡಳಿತ ಸಮಿತಿ ಹೊಂದಿರುವ ಅನುದಾನಿತ ಶಾಲೆಯಾಗಿದೆ. ಕೇರಳ ಶಿಕ್ಷಣ ಕಾನೂನುಗಳ ಪ್ರಕಾರ ಅನುದಾನಿತ ಶಾಲಾ ಮೆನೇಜ್‌ಮೆಂಟ್‌ನ ವಿರುದ್ಧವೂ ಸರಕಾರ ಕ್ರಮ ಕೈಗೊಳ್ಳಬಹುದಾಗಿದೆ. ಶಾಲೆಯ ಭದ್ರತೆಯನ್ನು ಸರಿಯಾದ ರೀತಿಯಲ್ಲಿ ಕಾಯ್ದುಕೊಳ್ಳದೆ ಅನುದಾನಿತ ಶಾಲೆಗಳ ಅಂಗೀಕಾರವನ್ನು ರದ್ದುಗೊಳಿಸುವ ಅಥವಾ ಅಂತಹ ಶಾಲೆಗಳನ್ನು ನೇರವಾಗಿ ವಹಿಸಿಕೊಳ್ಳಲು ಸರಕಾರಕ್ಕೆ ಅಧಿಕಾರವಿದೆಯೆಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಮೃತ ಬಾಲಕನ ಕುಟುಂಬಕ್ಕೆ 3 ಲಕ್ಷ ರೂ. ಧನ ಸಹಾಯ ಘೋಷಿಸಲಾಗಿದೆ. ಈ ಬಾಲಕನ ಸಹೋದರನ 12ನೇ ತರಗತಿ ತನಕ ಉಚಿತ ಶಿಕ್ಷಣ ನೀಡಲಾಗುವುದೆಂದೂ ಸಚಿವರು ತಿಳಿಸಿದ್ದಾರೆ.
ವಿದ್ಯುತ್ ಶಾಕ್ ತಗಲಿ ಸಾವನ್ನಪ್ಪಿದ ಮಿಥುನ್ ಮನುವಿನ ತಾಯಿ ಸುಜಿ ವಿದೇಶದಿಂದ ಇಂದು ಬೆಳಿಗ್ಗೆ ಊರಿಗೆ ಆಗಮಿಸಿದ್ದಾರೆ. ಬಾಲಕನ ಮೃತದೇಹವನ್ನು ಇಂದು ಅಂತಿಮ ದರ್ಶನಕ್ಕಿರಿಸಲಾಗಿದ್ದು, ಸಹಸ್ರಾರು ಮಂದಿ ಅಂತಿಮ ನಮನ ಸಲ್ಲಿಸಿದರು. ಮೃತದೇಹವನ್ನು ಇಂದೇ ಸಂಸ್ಕರಿಸಲಾಗುವುದು.