ವಿಮಾ ಕಾಯ್ದೆ ತಿದ್ದುಪಡಿ: ಸಂಸತ್‌ನ ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡನೆ
ನವದೆಹಲಿ: ಎಲ್ಲಾ ನಾಗರಿಕರಿಗೂ ವಿಮಾ ಸೌಲಭ್ಯ ಕಲ್ಪಿಸಿಕೊಡುವ ಗುರಿಯೊಂದಿಗೆ ವಿಮಾ ಕಾಯ್ದೆಯಲ್ಲಿ ತಿದ್ದುಪಡಿ ತರಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಜುಲೈ 22ರಂದು ಆರಂಭಗೊಳ್ಳಲಿರುವ ಸಂಸತ್‌ನ ಅಧಿವೇಶನದಲ್ಲಿ ವಿಮಾ ಕಾಯ್ದೆ 1978ಕ್ಕೆ ತಿದ್ದುಪಡಿ ತರುವ ಮಸೂದೆ ಮಂಡಿಸಲು ಸರಕಾರ ತೀರ್ಮಾನಿಸಿದೆ.
ಬಂಡವಾಳ ಹೂಡಿಕೆ ನಿಯಮಾವಳಿಯಲ್ಲಿ ಬದಲಾವಣೆ, ಋಣಾತ್ಮಕ ಪರಿಹಾರ ಕುರಿತು ಮಾನದಂಡದಲ್ಲಿ ಸಡಿಲಿಕೆ, ಮಧ್ಯವರ್ತಿಗಳು ಒಂದೇ ಬಾರಿ ನೋಂದಾವಣೆ, ವಿಮಾ ಕಂಪೆನಿಗಳು ಮತ್ತು ಇತರ ಹಣಕಾಸು ಸೇವೆ ಒದಗಿಸುವ ಬಗ್ಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ. ಬ್ಯಾಂಕಿಂಗ್ ಮಾದರಿಯಲ್ಲಿ ವಿಮಾ ವಲಯದಲ್ಲೂ ವರ್ಗೀಕರಣಕ್ಕೆ ನಿರ್ಧರಿಸಲಾಗಿದೆ. ಜೀವವಿಮಾ ಕಾಯ್ದೆ ಪ್ರಕಾರ ಜೀವ ವಿಮೆ ಒದಗಿಸುವ ಕಂಪೆನಿ ಸಾಮಾನ್ಯ ಅಥವಾ ಆರೋಗ್ಯ ವಿಮಾ ಸೌಲಭ್ಯ ಒದಗಿಸಲು ಅವಕಾಶವಿಲ್ಲ. ಸಾಮಾನ್ಯ ವಿಮೆ ಸೌಲಭ್ಯ ಒದಗಿಸುವ ಕಂಪೆನಿಗಳು ಆರೋಗ್ಯ, ವಾಹನ, ಅಗ್ನಿ ಅವಗಡ ಸೇರಿ ಇತರ ಅವಗಡಗಳಿಗೆ ವಿಮಾ ಸೌಲಭ್ಯವನ್ನಷ್ಟೇ ಒದಗಿಸಲು ಅವಕಾಶವಿದೆ. ಒಂದೇ ಕಂಪೆನಿಗೆ ಜೀವವಿಮೆ, ಸಾಮಾನ್ಯ ಅಥವಾ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲು ಸಂಯೋಜಿತ ಪರವಾನಿಗೆ ನೀಡುವಂತಿಲ್ಲವೆಂದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ನಿಯಮಾವಳಿಯಲ್ಲಿ ತಿಳಿಸಲಾಗಿದೆ. ತಿದ್ದುಪಡಿ ಮಸೂದೆಯ ಕರಡು ಸಿದ್ಧವಾಗಿದ್ದು, ಸಚಿವ ಸಂಪುಟದ ಒಪ್ಪಿಗೆ ಪಡೆದ ಬಳಿಕ ಅದನ್ನು ಸಂಸತ್‌ನಲ್ಲಿ ಮಂಡಿ ಸಲು ಹಣಕಾಸು ಸಚಿವಾಲಯ ಸಿದ್ಧತೆ ನಡೆಸಿದೆ.