ವಿವಾಹ ನಡೆದ ಎರಡನೇ ದಿನ ಹೆರಿಗೆ: ಮಗು ತನ್ನದಲ್ಲವೆಂದು ವರ
ಲಕ್ನೋ: ವಿವಾಹ ಕಳೆದು 1 ವರ್ಷ ಅಥವಾ ಆ ಬಳಿಕ ಮಕ್ಕಳು, ಕುಟುಂಬವೆಲ್ಲ ಮುಂದುವರಿಯುವು ದಾದರೆ ವಿವಾಹ ಕಳೆದ ಎರಡೇ ದಿನದಲ್ಲಿ ವಧು ಹೆತ್ತ ಘಟನೆ ಉತ್ತರ ಪ್ರದೇಶದಲ್ಲಿ ಸಂಭವಿಸಿದ್ದು, ಇದು ಆ ಕುಟುಂಬವನ್ನು ಆಶ್ಚರ್ಯಚಕಿತ ಗೊಳಿಸಿದೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯ ಒಂದು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳೆದ 24ರಂದು ಜೆಸ್ರಾ ಗ್ರಾಮದಲ್ಲಿ ವಿವಾಹ ನಡೆದಿತ್ತು. ಬಹಳ ಆಡಂಭರದಿಂದ ವಿವಾಹ ನಡೆಸಲಾಗಿತ್ತು. ದಂಪತಿಯರು ಎರಡು ದಿನ ಒಂದಾಗಿಯೇ ಕಳೆದಿದ್ದರು. ೨೬ರಂದು ವಧು ಬೆಳಿಗ್ಗೆ ಎದ್ದು ಮನೆಮಂದಿಗೆಲ್ಲ ಚಹಾ ತಯಾರಿಸಿ ನೀಡಿದ್ದಳು. ಆದರೆ ಸಂಜೆ ವೇಳೆಗೆ ಆಕೆಗೆ ನೋವು ಅನುಭವಕ್ಕೆ ಬಂದಿದ್ದು, ಬಳಿಕ ಯುವತಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆ ವೇಳೆ ನಡೆಸಿದ ತಪಾಸಣೆಯಲ್ಲಿ ನವ ವಧು ಗರ್ಭಿಣಿಯಾಗಿದ್ದಾಳೆಂದು ಕೂಡಲೇ ಹೆರಿಗೆ ನಡೆಸಬೇಕೆಂದು ವೈದ್ಯರು ಸೂಚಿಸಿದರು. ಆ ಬಳಿಕ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ.
ಈ ವೇಳೆ ವರ ಈ ಮಗು ನನ್ನದಲ್ಲ ವೆಂದು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಘಟನೆ ವಿವಾದವಾಯಿತು. ಗರ್ಭಿಣಿ ಎಂಬುದನ್ನು ಮರೆಮಾಚಿ ಹೆತ್ತವರು ವಿವಾಹ ನಡೆಸಿದ್ದಾರೆಂದು ಆರೋಪಿಸಿ ವರನ ಮನೆಯವರು ರಂಗಕ್ಕಿಳಿದರು. ಆದರೆ ವರ ಹಾಗೂ ವಧು ವಿವಾಹಕ್ಕೆ ಮುಂಚಿತವಾಗಿಯೇ ಸಂಪರ್ಕದಲ್ಲಿದ್ದರೆಂದು ಯುವತಿಯ ಹೆತ್ತವರು ಆರೋಪಿಸುತ್ತಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಇವರ ವಿವಾಹ ನಿಶ್ಚಯ ನಡೆಸಲಾಗಿತ್ತು. ಅಂದಿನಿಂದ ಇವರಿಬ್ಬರೂ ಸಂಪರ್ಕದಲ್ಲಿದ್ದರೆಂದು ಅವರು ತಿಳಿಸಿದ್ದಾರೆ. ಪ್ರಸ್ತುತ ಪಂಚಾಯತ್ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ವಧುವನ್ನು ಮಗುವಿನ ಜೊತೆ ಹೆತ್ತವರ ಮನೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ.