ವಿವಿಧ ಪ್ರಕರಣಗಳಲ್ಲಿ ಸೆರೆಗೀಡಾದ ನೆಲ್ಲಿಕಟ್ಟೆ ಬಳಿಯ ನಿವಾಸಿ ಚೇವಾರಿನಲ್ಲಿ ಕೃಷಿಕನ ಕುತ್ತಿಗೆಯಿಂದ ಸರ ಎಗರಿಸಿದ ಪ್ರಕರಣದಲ್ಲೂ ಆರೋಪಿ
ಕುಂಬಳೆ: ಕಳವು, ದರೋಡೆ ಸಹಿತ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ಸೆರೆ ಹಿಡಿದ ನೆಲ್ಲಿಕಟ್ಟೆ ಬಳಿಯ ಚೆನ್ನಡ್ಕ ನಿವಾಸಿ ಮುಹಮ್ಮದ್ ಸುಹೈಲ್ (32) ಕುಂಬಳೆ ಠಾಣೆ ವ್ಯಾಪ್ತಿ ಯಲ್ಲಿ ನಡೆದ ಸರ ಅಪಹರಣ ಪ್ರಕರಣ ದಲ್ಲೂ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ. ಚೇವಾರು ನಿವಾಸಿ ಕೃಷಿಕ ಗೋಪಾಲಕೃಷ್ಣ ಭಟ್ ಎಂಬವರ ಕುತ್ತಿಗೆಯಿಂದ ಎರಡೂವರೆ ಪವನ್ ಚಿನ್ನದ ಸರವನ್ನು ಎಗರಿಸಿರುವುದು ಮುಹಮ್ಮದ್ ಸುಹೈಲ್ ಆಗಿದ್ದಾನೆಂದು ತನಿಖೆಯಲ್ಲಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ರಿಮಾಂಡ್‌ನಲ್ಲಿ ರುವ ಆರೋಪಿಯನ್ನು ಅಲ್ಲಿಂದಲೇ ಬಂಧನ ದಾಖಲಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ರಿಮಾಂಡ್‌ನಿಂದ ಆರೋಪಿಯನ್ನು ಕಸ್ಟಡಿಗೆ ತೆಗೆದು ತನಿಖೆಯ ಭಾಗವಾಗಿ ಕುಂಬಳೆಗೆ ಕರೆದುಕೊಂಡು ಬರುವು ದಾಗಿಯೂ ಪೊಲೀಸರು ತಿಳಿಸಿದ್ದಾರೆ.
ಕಳೆದ ಎಪ್ರಿಲ್ 27ರಂದು ಬೆಳಿಗ್ಗೆ ತೋಟಕ್ಕೆ ತೆರಳುತ್ತಿದ್ದ ಗೋಪಾಲಕೃಷ್ಣ ಭಟ್‌ರ ಕುತ್ತಿಗೆಯಿಂದ ಸರ ಎಗರಿಸಲಾಗಿದೆ. ಗೋಪಾಲಕೃಷ್ಣ ಭಟ್ ತೋಟಕ್ಕೆ ತೆರಳುತ್ತಿದ್ದಾಗ ದಾರಿ ಕೇಳುವ ನೆಪದಲ್ಲಿ ಅವರ ಬಳಿಗೆ ತಲುಪಿದ ಆರೋಪಿ ಅವರ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದನು. ಆರೋಪಿಗಾಗಿ ಶೋಧ ನಡೆಯುತ್ತಿರುವಂತೆಯೇ ಮುಹಮ್ಮದ್ ಸುಹೈಲ್ ಸೆರೆಗೀಡಾದ ವಿಷಯ ತಿಳಿದು ಬಂದಿದೆ. ಕಳವು, ದರೋಡೆ ಪ್ರಕರಣದಲ್ಲಿ ಆರೋಪಿಯಾದ ಮುಹಮ್ಮದ್ ಸುಹೈಲ್ ವಯನಾಡ್‌ನಲ್ಲಿ ತಲೆಮರೆಸಿ ಕೊಂಡಿದ್ದನು. ವಯನಾಡ್‌ನ ವಡಕೇರಿ ಎಂಬಲ್ಲಿ ಕೋಳಿ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾನೆಂದು ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಅಧೀನದಲ್ಲಿರುವ ಪ್ರತ್ಯೇಕ ತನಿಖಾ ತಂಡ ಕಣಿಚ್ಚಿರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಟಿ.ಜಿ ದಿಲೀಪ್‌ರ ಸಹಾಯದೊಂದಿಗೆ ಸೆರೆ ಹಿಡಿಯಲಾಗಿದೆ. ಮುಹಮ್ಮದ್ ಸುಹೈಲ್ ವಿರುದ್ಧ ೧೬ರಷ್ಟು ಕೇಸುಗಳಿವೆ. ಈ ಪೈಕಿ ೧೦ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಆರಿಕ್ಕಾಡಿ ನಿವಾಸಿಯಾದ ಗಲ್ಫ್ ಉದ್ಯೋ ಗಿಯೊಬ್ಬರ ಮನೆಯಿಂದ ಎರಡು ವಾರಗಳ ಹಿಂದೆ ನಗ-ನಗದು ಕಳವಿಗೀಡಾಗಿತ್ತು. ಈ ಪ್ರಕರಣದಲ್ಲೂ ಮುಹಮ್ಮದ್ ಸುಹೈಲ್ ಶಾಮೀ ಲಾಗಿದ್ದಾನೆಯೇ ಎಂದು ತನಿಖೆ ನಡೆಸಲಾಗುವುದೆಂದೂ ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ ನಿವಾಸಿ ಅಸರ್ ಎಂಬಾತನೂ ಮುಹಮ್ಮದ್ ಸುಹೈಲ್ ಜತೆ ಅಪರಾಧ ಕೃತ್ಯಗಳಲ್ಲಿ ಶಾಮೀಲಾಗಿದ್ದಾನೆಂದೂ ಆತನಿಗಾಗಿ ಶೋಧ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.