ವ್ಯಾಪಾರಿ ಮನೆಯಿಂದ 300 ಪವನ್ ಚಿನ್ನಾಭರಣ, ಒಂದು ಕೋಟಿ ರೂ. ಕಳವು
ಕಣ್ಣೂರು: ವ್ಯಾಪಾರಿಯ ಮನೆ ಯಿಂದ 300 ಪವನ್ ಚಿನ್ನಾಭರಣ ಹಾಗೂ ಒಂದು ಕೋಟಿ ರೂಪಾಯಿ ಕಳವಿಗೀಡಾದ ಬಗ್ಗೆ ವರದಿಯಾಗಿದೆ.
ತಳಿಪರಂಬ ಮನ್ನ ಕೆಎಸ್ಇಬಿ ಬಳಿಯ ಅಶ್ರಫ್ ಟ್ರೇಡರ್ಸ್ ಮಾಲಕ ವಳಪಟ್ಟಣದ ಕೆ.ಪಿ. ಅಶ್ರಫ್ರ ಮನೆಯಿಂದ ಕಳವು ನಡೆದಿದೆ. ಅಶ್ರಫ್ ಹಾಗೂ ಕುಟುಂಬ ನವಂಬರ್ 19ರಂದು ತಮಿಳುನಾಡಿನ ಮಧುರೈಯಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ನಿನ್ನೆ ರಾತ್ರಿ 10.30ರ ವೇಳೆ ಮನೆಗೆ ಮರಳಿ ಬಂದಾಗ ಕಳವು ನಡೆದ ವಿಷಯ ತಿಳಿದುಬಂದಿದೆ.
ಮನೆಯ ಹಿಂಭಾಗದ ಕಿಟಿಕಿ ಮುರಿದು ಕಳ್ಳರು ಒಳಗೆ ಪ್ರವೇಶಿಸಿದ್ದಾರೆ. ಮನೆ ಹಾಗೂ ಪರಿಸರ ಪ್ರದೇಶದಲ್ಲಿದ್ದ ಸಿಸಿ ಕ್ಯಾಮರಾಗಳನ್ನು ಹಾನಿಗೊಳಿಸಿದ ಸ್ಥಿತಿಯಲ್ಲಿದೆ.ಹಣ ಹಾಗೂ ಚಿನ್ನಾಭರಣಗಳನ್ನು ಬೆಡ್ರೂಂನ ಕಪಾಟಿನಲ್ಲಿರಿಸಲಾಗಿತ್ತು. ಅವುಗಳನ್ನೆಲ್ಲಾ ಕಳ್ಳರು ದೋಚಿದ್ದಾರೆ. ವಿಷಯ ತಿಳಿದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಪರಿಶೀಲನೆ ಆರಂಭಿಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ತಲುಪಿದ್ದಾರೆ. ಕಳೆದ ಕೆಲವು ದಿನಗಳಿಂದ ವಿವಿಧೆಡೆಗಳಲ್ಲಿ ವ್ಯಾಪಕ ಕಳವು ನಡೆದಿದೆ. ಇದರಿಂದ ಜನರು ತೀವ್ರ ಆತಂಕಕ್ಕೊಳಗಾಗಿರುವಾಗಲೇ ವ್ಯಾಪಾರಿಯ ಮನೆಯಿಂದ ಭಾರೀ ಪ್ರಮಾಣದ ನಗ-ನಗದು ದೋಚಿದ ಘಟನೆ ನಡೆದಿದೆ.