ವ್ಯಾಪಾರಿ ಮನೆಯಿಂದ 300 ಪವನ್ ಚಿನ್ನ, 1 ಕೋಟಿ ರೂ. ಕಳವು: ತನಿಖೆ ಕರ್ನಾಟಕ, ತಮಿಳುನಾಡಿಗೆ ವಿಸ್ತರಣೆ
ಕಣ್ಣೂರು: ಕಣ್ಣೂರು ವಳಪಟ್ಟಣದಲ್ಲಿ ವ್ಯಾಪಾರಿಯ ಮನೆಯಿಂದ ೧ ಕೋಟಿ ರೂಪಾಯಿ ಹಾಗೂ ೩೦೦ ಪವನ್ ಚಿನ್ನಾಭರಣ ಕಳವಿಗೀಡಾದ ಪ್ರಕರಣದ ತನಿಖೆಯನ್ನು ಕರ್ನಾಟಕ ಹಾಗೂ ತಮಿಳುನಾಡಿಗೆ ವಿಸ್ತರಿಸಲಾಗಿದೆ. ಕಳವು ನಡೆಸಿದ ಬಳಿಕ ಆರೋಪಿಗಳು ಕರ್ನಾಟಕ ಅಥವಾ ತಮಿಳುನಾಡಿಗೆ ಪರಾರಿಯಾಗಿರಬಹು ದೆಂದು ಸಂಶಯಿಸಲಾಗುತ್ತಿದೆ. ಇದೇ ವೇಳೆ ಕಳವು ನಡೆದ ಮರುದಿನವೂ ಮನೆಗೆ ಕಳ್ಳ ನುಗ್ಗಿ ವಿವಿಧೆಡೆ ಜಾಲಾಡಿರುವುದು ಸಿಸಿ ಟಿವಿ ದೃಶ್ಯಗಳಿಂದ ಕಂಡು ಬಂದಿದೆ. ಮನೆಯಲ್ಲಿ ಯಾರೂ ಇಲ್ಲವೆಂದು ಖಚಿತಗೊಂಡ ಹಿನ್ನೆಲೆಯಲ್ಲಿ ಕಳ್ಳ ಎರಡನೇ ದಿನವೂ ಮನೆಗೆ ನುಗ್ಗಿದ್ದಾನೆಂದು ತಿಳಿದು ಬಂದಿದೆ. ಆದ್ದರಿಂದ ಮನೆಯವರ ಬಗ್ಗೆ ಪೂರ್ಣ ಮಾಹಿತಿ ಉಳ್ಳವರೇ ಈ ಕಳವು ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ಪೊಲೀಸರು ಸಂಶಯಿಸುತ್ತಿದ್ದಾರೆ.
ಎರಡು ದಿನ ಕೂಡಾ ಮನೆಗೆ ನುಗ್ಗಿರುವುದು ಒಬ್ಬನೇ ಆಗಿದ್ದಾನೆಯಾ ದರೂ ಆತನಿಗೆ ಇತರರ ಸಹಾಯ ಲಭಿಸಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ. ಮನೆಯೊಳಗಿನಿಂದ ೧೬ ಬೆರಳಚ್ಚುಗಳು ಹಾಗೂ ಕಳವಿಗೆ ಬಳಸಿದ ಒಂದು ಉಳಿ ಪತ್ತೆಯಾಗಿದ್ದು, ಇದು ತನಿಖೆಗೆ ನಿರ್ಣಾಯಕವಾಗಿದೆ.
ವಳಪಟ್ಟಣ ಮನ್ನ ನಿವಾಸಿ ಅಶ್ರಫ್‌ರ ಮನೆಯಿಂದ ಈ ಭಾರೀ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವಿಗೀಡಾಗಿದೆ. ಅಶ್ರಫ್ ಹಾಗೂ ಕುಟುಂಬ ತಮಿಳುನಾಡಿನ ಮಧುರೈ ಯಲ್ಲಿ ನಡೆದ ಮದುವೆ ಕಾರ್ಯ ಕ್ರಮದಲ್ಲಿ ಭಾಗವಹಿಸಲು ತೆರಳಿದ್ದ ಸಂದರ್ಭದಲ್ಲಿ ಮನೆಗೆ ಕಳ್ಳರು ನುಗ್ಗಿದ್ದಾರೆ. ಇದೇ ವೇಳೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಮಾನವಹಕ್ಕು ಆಯೋಗ ಸ್ವಯಂ ಕೇಸು ದಾಖಲಿಸಿಕೊಂಡಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಕಳವು ಭೀತಿ ಕೊನೆಗೊಳಿಸಲು ಕ್ರಮ ಕೈಗೊಳ್ಳಬೇಕೆಂದೂ ಪೊಲೀಸ್ ವರಿಷ್ಠಾಧಿಕಾರಿಗೆ ಆಯೋಗ ನಿರ್ದೇಶಿಸಿದೆ.