ಶಬರಿಮಲೆಯಲ್ಲಿ ಪ್ರತೀ ದಿನ 18 ಗಂಟೆ ದರ್ಶನ: ಸನ್ನಿಧಾನದಲ್ಲಿ ಮೊಬೈಲ್ ನಿಷೇಧ
ಪತ್ತನಂತಿಟ್ಟ: ಶಬರಿಮಲೆ ತೀರ್ಥಾಟನೆ ಇಂದು ಸಂಜೆ ಆರಂಭಗೊಳ್ಳಲಿ ರುವಂತೆಯೇ 18 ಗಂಟೆಗಳ ಕಾಲ ದರ್ಶನಕ್ಕಿರುವ ಸೌಕರ್ಯವನ್ನು ಏರ್ಪಡಿಸಲಾಗಿದೆ. ಕಳೆದಬಾರಿ ಇದು 16 ಗಂಟೆಯಾಗಿತ್ತು. ಮುಂಜಾನೆ 3 ಗಂಟೆಗೆ ಗರ್ಭಗುಡಿಯ ಬಾಗಿಲು ತೆರೆದರೆ ಮಧ್ಯಾಹ್ನ 1 ಗಂಟೆ ವರೆಗೂ, ಅಪರಾಹ್ನ 3ರಿಂದ ರಾತ್ರಿ 11 ಗಂಟೆ ವರೆಗೂ ಬಾಗಿಲು ತೆರೆದಿಡಲಾಗುವುದು. ವರ್ಚುವಲ್ ಕ್ಯೂ ಬುಕ್ಕಿಂಗ್ ಹೊರತಾಗಿ ವಂಡಿಪೆರಿಯಾರ್, ಎರುಮೇಲಿ, ಪಂಪಾ ಎಂಬೆಡೆಗಳಲ್ಲಿ ಸ್ಪೋಟ್ ಬುಕ್ಕಿಂಗ್‌ಗೆ ಸೌಕರ್ಯ ಏರ್ಪಡಿಸಲಾಗಿದೆ. ಪಂಪಾದಲ್ಲಿ ಏಳು ಕೌಂಟರ್‌ಗಳನ್ನು ಸಿದ್ಧಪಡಿಸಲಾಗುವುದು. ಆದರೆ ಆಧಾರ್ ಕಾರ್ಡ್‌ನ ಪ್ರತಿ ಕಡ್ಡಾಯವಾಗಿದೆ. ಕಳೆದ ಬಾರಿ ತಂಡದ ಓರ್ವನ ಮಾಹಿತಿಗಳನ್ನು ಮಾತ್ರವೇ ದಾಖಲಿಸಿ ಪಾಸ್ ನೀಡಲಾಗುತ್ತಿತ್ತು. ಆದರೆ ಈ ಬಾರಿ ಪ್ರತಿಯೋರ್ವರೂ ಆಧಾರ್ ಕಾರ್ಡ್ ಅಥವಾ ಪಾಸ್‌ಪೋರ್ಟ್ ಅಥವಾ ಐಡಿ ಕಾರ್ಡ್‌ನ ಪ್ರತಿ ನೀಡಬೇಕಾಗಿದೆ.
18ನೇ ಮೆಟ್ಟಿಲ ಮೇಲೆ ಈ ಬಾರಿ ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರಲಾಗಿದೆ. ಕೆಲವರು ಜೇಬಿನಲ್ಲಿ ಮೊಬೈಲ್ ಪೋನ್ ವೀಡಿಯೋ ಕ್ಯಾಮರಾ ಆನ್ ಮಾಡಿ ಗರ್ಭಗುಡಿ ಹಾಗೂ ಅಯ್ಯಪ್ಪನ ಪೂಜೆಯನ್ನು ಚಿತ್ರೀಕರಿಸಿ ಪ್ರಚಾರಪಡಿಸುತ್ತಿದ್ದಾರೆ. ಇದನ್ನು ತಡೆಯಬೇಕೆಂದು ತಂತ್ರಿ ನಿರ್ದೇಶಿಸಿದ ಹಿನ್ನೆಲೆಯಲ್ಲಿ ಮೊಬೈಲ್ ಫೋನ್ ನಿಷೇಧ ಕಡ್ಡಾಯಗೊಳಿಸ ಲಾಗಿದೆ. ಫೋನ್ ಸ್ವಿಚ್ ಆಫ್ ಮಾಡಿ ಇರಿಸಿಕೊಳ್ಳಬೇಕಾಗಿದೆ. ಮಾಳಿಗ ಪುರಂ ದೇವಿಯ ದರ್ಶನ ಕಳೆದು ಇಳಿದ ಬಳಿಕ ಮಾತ್ರವೇ ಫೋನ್ ಉಪಯೋಗಿಸಬಹು ದಾಗಿದೆ. ಇದೇ ವೇಳೆ ಅಯ್ಯಪ್ಪ ಭಕ್ತರ ಸಣ್ಣ ವಾಹನ ಗಳನ್ನು ಪಂಪಾದಲ್ಲಿ ನಿಲುಗಡೆಗೊಳಿಸಲು ವ್ಯವಸ್ಥೆ ಮಾಡಲಾಗಿದೆ.
ವರ್ಚುವಲ್ ಬುಕ್ಕಿಂಗ್ ಮೂಲಕ 70 ಸಾವಿರ ಮಂದಿಗೂ, ಸ್ಪೋಟ್ ಬುಕ್ಕಿಂಗ್ ಮೂಲಕ 10 ಸಾವಿರ ಮಂದಿ ಈ ಬಾರಿ ಪ್ರತಿದಿನ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.