ಶಾಲೆಯಲ್ಲಿ ಹಾಲು ಕುಡಿದು ಅಸ್ವಸ್ಥ : 30 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು
ಕಾಸರಗೋಡು: ಶಾಲೆಯಲ್ಲಿ ವಿತರಿಸಿದ ಹಾಲು ಸೇವಿಸಿದ ವಿದ್ಯಾರ್ಥಿಗಳು ನಂತರ ಅಸ್ವಸ್ಥರಾದ ಘಟನೆ ಆಲಂಪಾಡಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದಿದೆ. ಹೀಗೆ ಹಾಲು ಸೇವಿಸಿದ 30ರಷ್ಟು ವಿದ್ಯಾರ್ಥಿಗಳಿಗೆ ದೈಹಿಕ ಅಸ್ವಸ್ಥತೆ ಅನುಭವಗೊಂಡಿದ್ದು, ಅವರನ್ನು ಬಳಿಕ ಕಾಸರಗೋಡು ಮತ್ತು ಚೆಂಗಳ ಆಸ್ಪತ್ರೆಗಳಲ್ಲಾಗಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನಿನ್ನೆ ಹಾಲು ವಿತರಿಸಲಾಗಿತ್ತು. ಅದನ್ನು ಸೇವಿಸಿದಾಕ್ಷಣ ಅವರಿಗೆ ದೈಹಿಕ ಅಸ್ವಸ್ಥತೆ ತಲೆದೋರತೊಡಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ವಿತರಿಸಲಾದ ಹಾಲಿನ ಬಣ್ಣ ಬದಲಾದ ಸ್ಥಿತಿಯಲ್ಲಿತ್ತೆಂದು ಕೆಲವು ಮಕ್ಕಳು ತಿಳಿಸಿದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ವಿದ್ಯಾನಗರ ಪೊಲೀಸರು ಇನ್ನೊಂದೆಡೆ ತನಿಖೆ ನಡೆಸುತ್ತಿದ್ದಾರೆ.