ಶಿಕ್ಷಣ, ಆರೋಗ್ಯ, ರೈತರ ಕಲ್ಯಾಣ, ಮುಲಭೂತ ಸೌಕರ್ಯ ಅಭಿವೃದ್ಧಿ: ಕಡು ಬಡತನ ನಿರ್ಮೂಲನೆಗೆ ಜಿಲ್ಲಾ ಪಂ. ಬಜೆಟ್‌ನಲ್ಲಿ ಆದ್ಯತೆ
ಕಾಸರಗೋಡು: ಕಡು ಬಡತನ ನಿರ್ಮೂಲನೆಗೆ ಆದ್ಯತೆ ನೀಡಿ ಕಾಸರಗೋಡು ಜಿಲ್ಲಾ ಪಂಚಾಯತ್ 2025-26ನೇ ವಾರ್ಷಿಕ ಬಜೆಟನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು ಮಂಡಿಸಿದರು. ಜಿಲ್ಲಾ ಪಂ.ನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಇಂದು ಸಂಜೆ ನಡೆಯುವ ಸಭೆಯಲ್ಲಿ ಬಜೆಟ್ಗೆ ಅಂಗೀಕಾರ ನೀಡಲಾಗುವುದು. 972,761,211 ರೂ. ಆದಾಯ ನಿರೀಕ್ಷಿಸಿರುವ, 960,121,000 ರೂ. ವೆಚ್ಚ ಅಂದಾಜಿಸಿರುವ ಬಜೆಟ್ ಮಂಡಿಸಲಾಗಿದೆ. ಮೂಲಭೂತ ಅಭಿವೃದ್ಧಿಗೆ ಮಾತ್ರವಲ್ಲದೆ ಜನರ ಆದಾಯವನ್ನು ಹೆಚ್ಚಿಸಿ ಜೀವನ ಮಟ್ಟವನ್ನು ಅಭಿವೃದ್ಧಿಪಡಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ನುಡಿದಿದ್ದಾರೆ. ವಯೋವೃದ್ಧರಿಗೆ ಉತ್ತಮ ಚಿಕಿತ್ಸೆ, ಮರೆವು ರೋಗದಿಂದ ಬಳಲುತ್ತಿರುವವರಿಗೆ ವಿಶೇಷ ಕೇಂದ್ರ ತೆರೆಯುವುದು, ವಿಜ್ಞಾನ ಕೇರಳವನ್ನು ಉತ್ತಮ ಯೋಜನೆಯಾಗಿ ಜ್ಯಾರಿಗೆ ತರುವುದು, ಜಿಲ್ಲಾ ಪಂಚಾಯತ್, ಕೆಎಸ್ಆರ್ಟಿಸಿ, ಬಿಆರ್ಡಿಸಿ ಜಂಟಿಯಾಗಿ ಕಾಸರಗೋಡು ಸಫಾರಿ ಆರಂಭಿಸುವುದು, ನವೆಂಬರ್ 1ರ ಮುಂಚಿತ ಜಿಲ್ಲೆಯನ್ನು ತೀವ್ರ ಬಡತನಮುಕ್ತಗೊಳಿಸುವುದು, ಅಮಲು ಪದಾರ್ಥಗಳಿಂದ ನೂತನ ಜನಾಂಗವನ್ನು ಮುಕ್ತಗೊಳಿಸಲು ರಿದಂ ಎಂಬ ಸಮಗ್ರ ಯೋಜನೆ ಜ್ಯಾರಿಗೆ ತರುವುದು ಜಿಲ್ಲಾ ಪಂಚಾಯತ್ನ ಗುರಿಯಾಗಿದೆ.
ಶಿಕ್ಷಣ, ಆರೋಗ್ಯ, ರೈತರ ಕಲ್ಯಾಣ, ಕೈಗಾರಿಕೆ, ಮೂಲಭೂತ ಸೌಕರ್ಯ ಅಭಿವೃದ್ಧಿ ಎಂಬೀ ವಲಯಗಳಲ್ಲೂ ಬಜೆಟ್ ಗಮನ ಹರಿಸಲಿದೆ ಎಂದು ಶಾನವಾಸ್ ಪಾದೂರು ನುಡಿದರು. ಮಂಡನೆ ವೇಳೆ ಪರಪ್ಪ ಬ್ಲೋಕ್ ಪಂ. ಅಧ್ಯಕ್ಷೆ ಎಂ. ಲಕ್ಷ್ಮಿ, ಕಾರಡ್ಕ ಬ್ಲೋಕ್ ಪಂ. ಅಧ್ಯಕ್ಷ ಸಿಜಿ ಮ್ಯಾಥ್ಯು, ಕೆ. ಶಕುಂತಳ, ಎಸ್.ಎನ್. ಸರಿತ, ಎಂ. ಮನು, ಶಿನೋಜ್ ಚಾಕೊ, ಜೋಮನ್ ಜೋಸ್, ಎಂ. ಶೈಲಜಾ ಭಟ್, ಜಿ. ಸುಧಾಕರನ್, ಕೆ. ಬಾಲಕೃಷ್ಣನ್. ಕೆ. ಸಜಿತ್ ಕುಮಾರ್, ಶ್ಯಾಮಲಕ್ಷ್ಮಿ ಸಹಿತ ಹಲವರು ಉಪಸ್ಥಿತರಿದ್ದರು.