ಸಮುದ್ರದಡದಲ್ಲಿರಿಸಿದ್ದ ದೋಣಿ, ಇಂಜಿನ್, ಬಲೆ ಬೆಂಕಿಗಾಹುತಿ: ದುಷ್ಕರ್ಮಿಗಳು ಕಿಚ್ಚಿಟ್ಟಿರುವುದಾಗಿ ಸಂಶಯ; ತನಿಖೆ ಆರಂಭ
ಕುಂಬಳೆ: ಮೀನುಗಾರಿಕೆ ಬಳಿಕ ಸಮುದ್ರ ದಡದಲ್ಲಿರಿಸಿದ್ದ ದೋಣಿ, ಇಂಜಿನ್ ಹಾಗೂ ಬಲೆ ಬೆಂಕಿಗಾಹುತಿಯಾಗಿದೆ. ಮುಟ್ಟಂ ಕಡಪ್ಪುರದಲ್ಲಿ ಇಂದು ಮುಂಜಾನೆ 2.30ರ ವೇಳೆ ಘಟನೆ ನಡೆದಿದೆ. ಮುಟ್ಟಂ ಬೇರಿಕೆ ಬಂಗರದ ಕೀರ್ತೇಶ್ ದಾಮೋದರ ಎಂಬವರ ಮಾಲಕತ್ವದ ದೋಣಿ ಇದಾಗಿದೆ. ಮೀನುಗಾರಿಕೆ ಬಳಿಕ ನಿನ್ನೆ ಬೆಳಿಗ್ಗೆ ದೋಣಿ ಬಲೆ ಸಹಿತ ವಿವಿಧ ಸಾಮಗ್ರಿಗಳನ್ನು ಮುಟ್ಟಂ ಕಡಪ್ಪುರದಲ್ಲಿರಿಸಲಾಗಿತ್ತು. ಇಂದು ಬೆಳಿಗ್ಗೆ ಮತ್ತೆ ಮೀನುಗಾರಿಕೆಗೆ ತೆರಳಲಿರುವಂತೆಯೇ ಮುಂಜಾನೆ 2.30ರ ವೇಳೆ ದೋಣಿ ಬೆಂಕಿಗಾಹುತಿ ಯಾದ ವಿಷಯ ತಿಳಿದುಬಂದಿದೆ. ಇತರ ಮೀನು ಕಾರ್ಮಿಕರು ನೀಡಿದ ಮಾಹಿತಿ ಮೇರೆಗೆ ದಾಮೋದರ ಘಟನೆ ಸ್ಥಳಕ್ಕೆ ತೆರಳಿದ್ದು, ಅಷ್ಟರೊಳಗೆ ಪೂರ್ಣವಾಗಿ ಉರಿದು ನಾಶಗೊಂಡಿತ್ತು. ಸುಮಾರು ೬ ಲಕ್ಷ ರೂಪಾಯಿಯಷ್ಟು ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ. ವಿಷಯ ತಿಳಿದು ಕುಂಬಳೆ ಠಾಣೆ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್, ಎಸ್‌ಐಗಳಾದ ಗಣೇಶ್, ವಿ.ಕೆ. ವಿಜಯನ್ ಘಟನೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಇದೇ ವೇಳೆ ದೋಣಿಗೆ ಬೆಂಕಿ ಹತ್ತಿಕೊಳ್ಳುವಸಾಧ್ಯತೆ ಇಲ್ಲವೆಂದೂ ಇದು ದುಷ್ಕರ್ಮಿಗಳು ನಡೆಸಿದ ಕೃತ್ಯವಾಗಿರಬಹುದೆಂಬ ಸಂಶಯ ವನ್ನು ದೋಣಿಯ ಮಾಲಕ ವ್ಯಕ್ತಪ ಡಿಸಿದ್ದಾರೆ. ಇದರಂತೆ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ. ಅಲ್ಲದೆ ಸಂಶಯದ ಮೇರೆಗೆ 10ರಷ್ಟು ಮಂದಿಯನ್ನು ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸಲಾಗಿದೆ.
ಇಂದು ಫಾರೆನ್ಸಿಕ್ ತಜ್ಞರು ತಲುಪಿ ತಪಾಸಣೆ ನಡೆಸುವರೆಂದು ತಿಳಿಸಲಾಗಿದೆ.