ಸಮುದ್ರಪಾಲಾದ ಟೈಲರ್ ಅಂಗಡಿ ಮಾಲಕನ ಮೃತದೇಹ ಮುಸೋಡಿಯಲ್ಲಿ ಪತ್ತೆ: ಆತ್ಮಹತ್ಯೆ ಶಂಕೆ
ಮಂಜೇಶ್ವರ: ಹೊಸಬೆಟ್ಟು ಕುಂಡುಕೊಳಕೆಯಲ್ಲಿ ಸಮುದ್ರಪಾಲಾದ ಟೈಲರ್ ಅಂಗಡಿ ಮಾಲಕ ಭಾಸ್ಕರ (58)ರ ಮೃತದೇಹ ಉಪ್ಪಳ ಮುಸೋಡಿಯಲ್ಲಿ ಪತ್ತೆಯಾಗಿದೆ. ಕಡಂಬಾರು ನೀರೊಲ್ಪೆ ನಿವಾಸಿಯಾದ ಇವರು ಹೊಸಂಗಡಿಯಲ್ಲಿ ಎಸ್‌ಎ ಟೈಲರ್ಸ್ ಎಂಬ ಅಂಗಡಿ ಹೊಂದಿದ್ದರು. ಇವರು ಹಾಗೂ ಇವರ ಪತ್ನಿ ಮಾಲತಿ ಶನಿವಾರ ಸಂಜೆ 5.30 ರ ವೇಳೆಗೆ ಕುಂಡುಕೊಳಕೆ ಬೀಚ್‌ಗೆ ಸ್ಕೂಟರ್‌ನಲ್ಲಿ ತೆರಳಿದ್ದರು. ಆ ಬಳಿಕ ಪತ್ನಿ ಮಾಲತಿ ಅಸ್ವಸ್ಥ ಸ್ಥಿತಿಯಲ್ಲಿ ಸಮುದ್ರ ದಡದಲ್ಲಿ ಪತ್ತೆಯಾಗಿದ್ದರು. ಭಾಸ್ಕರರಿಗಾಗಿ ಸ್ಥಳೀಯರು ಹುಡುಕಾಟ ನಡೆಸಿದ್ದರು. ಪೊಲೀಸರು, ಕರಾವಳಿ ಪೊಲೀಸರು ಶನಿವಾರ ರಾತ್ರಿ 10.30 ಗಂಟೆವರೆಗೆ ಹುಡುಕಾಟ ನಡೆಸಿದ್ದಾರೆ. ಈ ಮಧ್ಯೆ ನಿನ್ನೆ ಅಪರಾಹ್ನ 3 ಗಂಟೆ ವೇಳೆಗೆ ಮುಸೋಡಿ ಸಮುದ್ರ ದಡದಲ್ಲಿ ಮೃತದೇಹ ಪತ್ತೆಯಾಗಿದೆ.
ಇಂದು ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ದಂಪತಿ ಆತ್ಮಹತ್ಯೆಗೆ ಯತ್ನಿಸಿರಬೇಕೆಂದು ಶಂಕಿಸಲಾಗುತ್ತಿದ್ದು, ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಹೊಸಂಗಡಿ ಪರಿಸರದಲ್ಲಿ ಚಿರಪರಿಚಿತರಾದ ಭಾಸ್ಕರ್ ಕಡಂಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವ ವೇಳೆ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದರು. ಆಡಳಿತ ಸಮಿತಿ ಸದಸ್ಯರಾಗಿಯೂ, ಕ್ಷೇತ್ರದ ಅಂಗ ಸಂಸ್ಥೆಯಾದ ಸೇವಾ ಸ್ಪೂರ್ತಿಯ ಮಾಜಿ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ, ಪುತ್ರ ಕಿರಣ್ ಕುಮಾರ್, ಸಹೋದರರಾದ ನಾರಾಯಣ ಡ್ರೈವರ್, ಬಾಬು, ರಮೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಕಡಂಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿ, ಮಹಿಳಾ ಮಂಡಳಿ, ಸೇವಾ ಸ್ಪೂರ್ತಿ, ಗರುಡ ಫ್ರೆಂಡ್ಸ್, ಕಜೆಕೋಡಿ ಫ್ರೆಂಡ್ಸ್ ಸಂತಾಪ ಸೂಚಿಸಿದೆ.