ಸಹಕಾರಿ ರಂಗವನ್ನು ದುರುಪಯೋಗ ಮಾಡುವ ರಾಜ್ಯ ಸರಕಾರ- ಸಹಕಾರಿ ಭಾರತಿ
ಕಾಸರಗೋಡು: ದೇಶದ ಎಲ್ಲೆಡೆ ಸಹಕಾರಿ ಸಂಸ್ಥೆಗಳು ಡಿಜಿಟಲ್ ತಂತ್ರಜ್ಞಾನ ಬಳಸಿ ಪ್ರಗತಿ ಪಡೆಯುತ್ತಿದ್ದರೆ, ಕೇರಳದಲ್ಲಿ ಸಹಕಾರಿ ರಂಗವು ಸರ್ಕಾರದ, ಅನಗತ್ಯ ಕಾರ್ಯಕ್ರಮಗಳಿಗೆ ಹಾಗೂ ಸಂಘಟನೆಗಳಿಗೆ ಜಾಹೀರಾತು ಹಾಗೂ ಆರ್ಥಿಕ ನೆರವು ನೀಡುವ ಕೇಂದ್ರಗಳಾಗಿ ಮಾರ್ಪಟ್ಟಿವೆ. ಮಿಲ್ಮಾ ಸಂಸ್ಥೆಯು ಕ್ಷೀರ ಉತ್ಪಾದಕರಿಗೆ ನ್ಯಾಯಯುತ ಸೌಲಭ್ಯ ನೀಡದೆ ಶೋಷಣೆ ಮಾಡುತ್ತಿದೆ. ಸದಸ್ಯರಿಗೆ ಸಬ್ಸಿಡಿ ದರದಲ್ಲಿ ಪಶು ಆಹಾರ, ವೈದ್ಯಕೀಯ ನೆರವು, ತಾಂತ್ರಿಕ ಶಿಕ್ಷಣ ನೀಡುವ ಬದಲಾಗಿ ಅವರನ್ನು ಗುಲಾಮರಂತೆ ನಡೆಸಿಕೊಂಡು ಅನ್ಯಾಯ ಎಸಗಲಾಗುತ್ತಿದೆ ಎಂದು ಹಿರಿಯ ಸಹಕಾರಿ ನೇತಾರ ಅಡ್ವೊಕೇಟ್ ಕೆ.ಕೆ.ನಾರಾಯಣನ್ ಅಭಿಪ್ರಾಯಪಟ್ಟರು.
ಸಹಕಾರ ಭಾರತಿ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಮುನಿಸಿಪಲ್ ಸಭಾಂಗಣ ದಲ್ಲಿ ಏರ್ಪಡಿಸಿದ್ದ ಸಹಕಾರ ಸಪ್ತಾಹ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಣ್ಣೂರು ಜಿಲ್ಲೆಯ ಕೋ ಆಪರೇಟಿವ್ ಇನ್‌ಸ್ಪೆಕ್ಟರ್ ಪಿ.ಅಶೋಕನ್ ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರಿ ರಂಗದ ಪಾತ್ರ ಎಂಬ ವಿಷಯದಲ್ಲಿ ಅಭಿಪ್ರಾಯ ಮಂಡಿಸಿದರು. ಸಹಕಾರ ಭಾರತಿ ಕೇರಳ ರಾಜ್ಯ ಅಧ್ಯಕ್ಷ ಅಡ್ವೊಕೇಟ್ ಕರುಣಾಕರನ್ ನಂಬ್ಯಾರ್, ಸಹಕಾರ ಭಾರತಿ ರಾಜ್ಯ ಸಮಿತಿ ಸದಸ್ಯ ಐತ್ತಪ್ಪ ಮವ್ವಾರು, ಪ್ರಾಂತ್ಯ ಕಾರ್ಯದರ್ಶಿ ಗಣೇಶ್ ಪಾರೆಕಟ್ಟೆ, ಎಂಪ್ಲಾಯೀಸ್ ಸೆಲ್ ಪ್ರಮುಖ್ ರಾಧಾಕೃಷ್ಣನ್ ಕರುನಾಡು ಮಾತನಾಡಿದರು.ಜಿಲ್ಲಾ ಅಧ್ಯಕ್ಷ ಪದ್ಮರಾಜ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣನ್ ಕರಿಂಬಿಲ್ ಸ್ವಾಗತಿಸಿದರು.