ಸಾರ್ವಜನಿಕ ಶಿಕ್ಷಣ ಅಧಃಪತನ ಆರೋಪ : ಎನ್‌ಟಿಯುನಿಂದ ಡಿಡಿಇ ಕಚೇರಿ ಮಾರ್ಚ್

ಕಾಸರಗೋಡು: ಸಾರ್ವಜನಿಕ ಶಿಕ್ಷಣವನ್ನು ಎಡರಂಗ ಸರಕಾರ ಅಧಃಪತನದತ್ತ ತಳ್ಳಿದೆ ಎಂದು ಆರೋಪಿಸಿ ದೇಶೀಯ ಅಧ್ಯಾಪಕ ಪರಿಷತ್ ಕಾಸರಗೋಡು ಡಿಡಿಇ ಕಚೇರಿಗೆ ಮಾರ್ಚ್ ನಡೆಸಿತು. ದೇಶೀಯ ಅಧ್ಯಾಪಕ ಪರಿಷತ್‌ನ ರಾಜ್ಯ ಸಮಿತಿ ಉಪಾದ್ಯಕ್ಷ ಕೆ.ಕೆ. ರಾಜೇಶ್ ಉದ್ಘಾಟಿಸಿ ಮಾತನಾಡಿದರು. ನ್ಯಾಯವಾಗಿ ಸಿಗಬೇಕಾದ ಸವಲತ್ತುಗಳನ್ನು ನೀಡದೆ ಶೋಷಿಸಿ ಸರಕಾರ ಅಧ್ಯಾಪಕ ವರ್ಗವನ್ನು ಕಡೆಗಣಿಸುತ್ತಿದೆ ಎಂದು ಅವರು ಆರೋಪಿಸಿದರು. ಸಾರ್ವಜನಿಕ ಶಿಕ್ಷಣ ರಂಗದ ಬೇಡಿಕೆಗಳಾದ 12ನೇ ವೇತನ ಪರಿಷ್ಕರಣೆ ಜ್ಯಾರಿಗೊಳಿಸದಿರುವುದು, ಪಿಎಂಶ್ರೀ ಯೋಜನೆಯನ್ನು ಜ್ಯಾರಿಗೊಳಿಸದಿರುವುದು, ತುಟ್ಟಿಭತ್ತೆ 117 ತಿಂಗಳು ಬಾಕಿ ಉಳಿಸಿರುವುದು, ಆರು ವರ್ಷಗಳ ಲೀವ್ ಸೆರೆಂಡರ್, ಮೆಡಿಸೆಪ್ ಚಿಕಿತ್ಸೆ, ಸಂಸ್ಕೃತ ವಿದ್ಯಾರ್ಥಿ ವೇತನ, ಅಧ್ಯಾಪಕರ ಅಂಗೀಕಾರ ಬಗ್ಗೆ ವಿಳಂಬ ನೀತಿ, ಕನ್ನಡಿಗರ ಮೇಲಿನ ಮಲತಾಯಿ ಧೋರಣೆ ಮೊದಲಾದ ವಿಷಯಗಳನ್ನು ಮುಂದಿಟ್ಟು ಧರಣಿ, ಮಾರ್ಚ್ ನಡೆಸಲಾಗಿದೆ. ಜಿಲ್ಲಾ ಸಮಿತಿ ಸದಸ್ಯ ಸತೀಶ್ ಶೆಟ್ಟಿ ಒಡ್ಡಂಬೆಟ್ಟು, ರಾಜ್ಯ ಮಹಿಳಾವಿಂಗ್ ಜೊತೆ ಕಾರ್ಯದರ್ಶಿ ಸುಚೇತ ಟೀಚರ್, ರಾಜ್ಯ ಸಮಿತಿ ಸದಸ್ಯ ರಂಜಿತ್, ಕುಂಬಳೆ ತಾಲೂಕು ಸಮಿತಿ ಅಧ್ಯಕ್ಷ ದಿನೇಶ್, ಜಿಲ್ಲಾಧ್ಯಕ್ಷ ಕೃಷ್ಣನ್ ಮಾತನಾಡಿದರು. ಹಲವರು ಭಾಗವಹಿಸಿದರು. ಜಿಲ್ಲಾ ಕಾರ್ಯದರ್ಶಿ ಅಜಿತ್ ಕುಮಾರ್ ಸ್ವಾಗತಿಸಿ, ಭ್ರಮರಾಂಬಿಕ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page