ಸಾಲ ಪಡೆದ ಐದು ಲಕ್ಷ ರೂಪಾಯಿ ಮರಳಿ ನೀಡಿದ ಡಿಸಿಸಿ ಅಧ್ಯಕ್ಷ
ಕೊಚ್ಚಿ: ಕೇರಳ ಕಾಂಗ್ರೆಸ್ ನೇತಾರ ಕಾನೂನಿನ ಮೊರೆ ಹೋಗುವುದರೊಂದಿಗೆ ಕಾಸರಗೋಡು ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಸಾಲವಾಗಿ ಪಡೆದ ಐದು ಲಕ್ಷ ರೂಪಾಯಿಗಳನ್ನು ಮರಳಿ ನೀಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೃಕ್ಕರಿಪುರ ಮಂಡಲದಲ್ಲಿ ಯುಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಕೇರಳ ಕಾಂಗ್ರೆಸ್ ನೇತಾರ ಎಂ.ಪಿ. ಜೋಸೆಫ್ ಅವರು ಫೈಸಲ್ ವಿರುದ್ಧ ನ್ಯಾಯಾಲಯವನ್ನು ಸಮೀಪಿಸಿದ್ದರು. ಕಳೆದ ನವೆಂಬರ್‌ನಲ್ಲಿ ಒಂದು ತಿಂಗಳ ಕಾಲಾವಧಿಗೆ ೧೦ ಲಕ್ಷ ರೂಪಾಯಿ ಸಾಲವಾಗಿ ನೀಡಿರುವುದಾಗಿಯೂ, ಅದರಲ್ಲಿ ಐದು ಲಕ್ಷ ರೂಪಾಯಿ ಮರಳಿ ನೀಡದೆ ವಂಚಿಸಿರುವುದಾಗಿ ಆರೋಪಿಸಿ ಜೋಸೆಫ್ ನ್ಯಾಯಾಲಯವನ್ನು ಸಮೀಪಿಸಿದ್ದರು. ಈ ಪ್ರಕರಣವನ್ನು ಡಿಸೆಂಬರ್ ೧೯ರಂದು ನ್ಯಾಯಾಲಯ ಪರಿಗಣಿಸಲು ನಿರ್ಧರಿಸಿದ ಬೆನ್ನಲ್ಲೇ ಫೈಸಲ್ ಹಣ ಮರಳಿ ನೀಡಿದ್ದಾರೆ.