ಸಾಲ ಪಡೆಯುವಿಕೆ: ಕೇರಳಕ್ಕೆ ಹೊಸ ಷರತ್ತು ವಿಧಿಸಿದ ಕೇಂದ್ರ

ತಿರುವನಂತಪುರ: ತೀವ್ರ ಆರ್ಥಿಕ  ಮುಗ್ಗಟ್ಟಿನಲ್ಲಿ ಸಿಲುಕಿ ಹೊರಬರಲು ಪದೇ ಪದೇ ಸಾಲ ಪಡೆಯುತ್ತಿರುವ ಕೇರಳಕ್ಕೆ ಕೇಂದ್ರ ಸರಕಾರ ಇದೀಗ ಹೊಸ ಷರತ್ತು ವಿಧಿಸಿದೆ.

ಇದರಂತೆ ಕೇರಳ ಇನ್ನು ಮುಂದೆ ಸಾಲ ಪಡೆಯುವ ಹಾಗಿದ್ದಲ್ಲಿ ಕಂಟ್ರೋಲ್ ಆಂಡ್ ಅಡಿಟರ್ ಜನರಲ್  (ಸಿಎಜಿ)ರ ಫಿನಾನ್ಸ್ ಅಕೌಂಟ್ ವರದಿಯನ್ನು ಇನ್ನು ವಿಧಾನಸಭೆಯಲ್ಲಿ ಮಂಡಿಸಬೇ ಕೆಂಬುವುದು ಕೇಂದ್ರ ಸರಕಾರ ವಿಧಿಸಿದ ಹೊಸ ಷರತ್ತು ಆಗಿದೆ.  ಜಿಲ್ಲೆಯಲ್ಲಿ ತಯಾರಿಸಲಾಗಿರುವ ಸಿಎಜಿ ವರದಿಗೆ ಇನ್ನು ಸಹಿ ಬೀಳದೇ ಇರುವ ಕಾರಣದಿಂದಾಗಿ ಅದನ್ನು ವಿಧಾನಸಭೆಯಲ್ಲಿ ಮಂಡಿಸಲು ಸಾಧ್ಯವಾಗದೆ ತೀವ್ರ ಇಕ್ಕಟ್ಟಿಗೆ ಕೇರಳ ಸರಕಾರ ಸಿಲುಕಿದೆ. ಕೇಂದ್ರ ಸರಕಾರ ಇಂತಹ ಷರತ್ತು ಇರಿಸುತ್ತಿರುವುದು ಇದೇ ಮೊದಲಬಾರಿಯಾಗಿದೆ.

ಖಜಾನೆ, ಪಿಎಫ್ (ಭವಿಷ್ಯನಿಧಿ), ಠೇವಣಿಗಳು ಒಳಗೊಳ್ಳುವ ಪಬ್ಲಿಕ್ ಅಕೌಂಟ್ ಬೆಳವಣಿಗೆ ಇತ್ಯಾದಿಗಳನ್ನು ಅವಲೋಕನೆ ನಡೆಸಿ ಅದರ ವ್ಯಾಪ್ತಿಯಲ್ಲಿ ಸಾಲ ಪಡೆಯುವ ಮಿತಿ ನಿರ್ಣಯಿಸಲಾಗುತ್ತಿದೆ. 12,000 ಕೋಟಿ ರೂ.ಗಳ ನಿರೀಕ್ಷೆಯೊಂದಿಗೆ ಕೇಂದ್ರ ಸಾಲ ಮಿತಿ ನಿರ್ಣಯಿಸುತ್ತಿದೆ. ಆದರೆ ಪಬ್ಲಿಕ್ ಅಕೌಂಟ್‌ನಲ್ಲಿ  ನಿರೀಕ್ಷಿತ ಬೆಳವಣಿಗೆ ಇಲ್ಲದೆ ಇರುವುದರಿಂದಾಗಿ ಈ ವರ್ಷ ಇನ್ನು 11,500 ಕೋಟಿ ಸಾಲ ಪಡೆಯಲು ನಮಗೆ ಅರ್ಹತೆ ಇದೆ ಎಂದು ತೋರಿಸಿ  ಕೇರಳ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಅದನ್ನು ಪರಿಶೀಲಿಸಿದ ಕೇಂದ್ರ ಸರಕಾರ ಕೇರಳಕ್ಕೆ ಈ ಹೊಸ ನಿಬಂಧನೆ ಏರ್ಪಡಿಸಿದೆ. ರಾಜ್ಯದ ಆರ್ಥಿಕ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲು ಕೇರಳ ಸರಕಾರ ತಯಾರಾಗಿದ್ದರೂ ಆ ವರದಿಗೆ ಸಿಐಜಿ ಸಹಿ ಹಾಕಿದಲ್ಲಿ ಮಾತ್ರವೇ ಅದನ್ನು ವಿಧಾನಸಭೆಯಲ್ಲಿ ಮಂಡಿಸಲು ಸಾಧ್ಯವಾಗಲಿದೆ. ಅದಕ್ಕೆ ಸಿಐಜಿ ಇನ್ನೂ ಸಹಿ ಹಾಕದೆ ವಿಳಂಬಗೊಳಿ ಸುವುದಾದರೂ ಯಾತಕ್ಕಾಗಿ ಎಂಬುವುದು ಇನ್ನೂ ಸ್ಪಷ್ಟಗೊಂಡಿಲ್ಲ. ಸಹಿ ಹಾಕದೆ ಇರುವ ಹಿನ್ನೆಲೆಯಲ್ಲಿ ಆ ವರದಿಯನ್ನು ಕಳೆದ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಲು ಸಾಧ್ಯವಾಗಿರಲಿಲ್ಲ.

ಇನ್ನು ಸಹಿ ಹಾಕಿದಲ್ಲಿ ಅದನ್ನು ಮಂಡಿಸಲು ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಬೇಕಾಗಿ ಬರಲಿದೆ ಅಥವಾ ಮುಂದಿನ ವಿಧಾನ ಸಭಾ ಅಧಿವೇಶನದ ತನಕ ಕಾದು ನಿಲ್ಲಬೇಕಾಗಿ ಬರಲಿದೆ. ಇಲ್ಲವಾದಲ್ಲಿ ಹೊಸ ಸಾಲ ಪಡೆಯಲು ಸಾಧ್ಯವಾಗದ ಸ್ಥಿತಿ ಸರಕಾರಕ್ಕೆ ಉಂಟಾಗಲಿದೆ. ಇದು ಸರಕಾರವನ್ನು ಈಗ ತೀವ್ರ ಇಕ್ಕಟ್ಟಿನಲ್ಲಿ ಸಿಲುಕುವಂತೆ ಮಾಡಿದೆ.

Leave a Reply

Your email address will not be published. Required fields are marked *

You cannot copy content of this page