ಹದಗೆಟ್ಟ ಲಾಲ್‌ಭಾಗ್- ಕುರುಡಪದವು ರಸ್ತೆಯಲ್ಲಿ ವಾಹನ ಸಂಚಾರ ದುಸ್ತರ: ದುರಸ್ತಿಗೆ ಕಾಲವಿಳಂಬ

ಪೈವಳಿಕೆ: ಬೇಸಿಗೆ ಕಾಲದಲ್ಲೇ ಶೋಚನೀಯಗೊಂಡು ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದ ಮಾಸಿಕುಮೇರಿ -ಕುರುಡಪದವು ರಸ್ತೆ ಮಳೆ ಆರಂಭದೊಂದಿಗೆ ಇನ್ನಷ್ಟು ಹದಗೆಟ್ಟಿದೆ. ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಲಾಲ್‌ಭಾಗ್‌ನಿಂದ ಕುರುಡಪದವು ತನಕದ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗಳು ರೂಪುಗೊಂಡಿದ್ದು, ಬಸ್ ಸಹಿತ ವಾಹನಗಳಿಗೆ ಸಂಚಾರವೇ ತೊಡಕಾಗಿದೆ. ದಿನನಿತ್ಯ ನೂರಾರು ವಾಹನಗಳು ಈ ದಾರಿಯಲ್ಲಿ ಸಂಚರಿಸುತ್ತಿದ್ದು, ಬಸ್‌ಗಳ ಹಾಗೂ ಇತರ ವಾಹನಗಳ ಬಿಡಿ ಭಾಗಗಳು ಹಾನಿಯಾಗುತ್ತಿದೆ ಎಂದು ವಾಹನ ಮಾಲಕರು ತಿಳಿಸುತ್ತಿದ್ದಾರೆ.  ಮಳೆಗಾಲದಲ್ಲಿ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಹೊಂಡಗಳಲ್ಲಿ ತುಂಬಿ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಹಲವು ವರ್ಷಗಳಿಂದಲೇ ಹಾನಿ ಗೊಳ್ಳಲು ಆರಂಭಿಸಿದ ಈ ರಸ್ತೆಯ ದುರಸ್ತಿಗೆ ಇದುವರೆಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ಸ್ಥಳೀಯರು ದೂರುತ್ತಾರೆ. ರಸ್ತೆ ಅಭಿವೃದ್ಧಿಗಾಗಿ ನಾಲ್ಕೂವರೆ ಕೋಟಿ ರೂ. ಮಂಜೂರಾ ಗಿದೆ ಎಂದು ಹೇಳಲಾಗುತ್ತಿದ್ದು, ಗುತ್ತಿಗೆದಾರ ಹಾಗೂ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಪರಿಶೀಲಿಸಿ ತೆರಳಿದರೂ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ ವೆಂದು ನಾಗರಿಕರು ತಿಳಿಸಿದ್ದಾರೆ.ಪೈವಳಿಕೆ ಪಂಚಾಯತ್‌ನ 1, 2, 3 ಹಾಗೂ 19ನೇ ವಾರ್ಡ್ ಮೂಲಕ ಸಾಗುವ ಈ ರಸ್ತೆ ಒಟ್ಟು ಏಳೂಮುಕ್ಕಾಲು ಕಿಲೋ ಮೀಟರ್ ಉದ್ದವಿದ್ದು, ಐದೂವರೆ ಮೀಟರ್ ಅಗಲದಲ್ಲಿ ಅಭಿವೃದ್ಧಿಗೊ ಳಿಸಲಾಗು ತ್ತಿದೆ ಎಂದು ಹೇಳಲಾಗುತ್ತಿದೆ. ಆದರೂ ಕಾಮಗಾರಿ ಆರಂಭಿಸಲು ಮೀನಾಮೇಷ ಎಣಿಸುತ್ತಿರುವುದು ಸ್ಥಳೀಯರಲ್ಲಿ ರೋಷಕ್ಕೆ ಕಾರಣವಾಗಿದೆ.

You cannot copy contents of this page