ಹದಿನಾಲ್ಕು ತಿಂಗಳಲ್ಲಾಗಿ ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದು 885 ಮೊಬೈಲ್ ಫೋನ್‌ಗಳು: 475ನ್ನು ಪತ್ತೆಹಚ್ಚಿದ ಪೊಲೀಸರು
ಕಾಸರಗೋಡು: ಕಳೆದ 14 ತಿಂಗಳಲ್ಲಿ ಜಿಲ್ಲೆಯಲ್ಲಿ 885 ಮೊಬೈಲ್ ಫೋನ್‌ಗಳು ನಾಪತ್ತೆಯಾಗಿವೆ. ಅದರಲ್ಲಿ 475 ಫೋನ್‌ಗಳು ಪತ್ತೆಹಚ್ಚಿ ಮರು ವಶಪಡಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಇದರಲ್ಲಿ ಹೆಚ್ಚಿನವುಗಳನ್ನು ಕರ್ನಾಟಕದ ವಿವಿಧ ಪ್ರದೇಶಗಳಿಂದ ಪತ್ತೆಹಚ್ಚಲಾಗಿದೆ. ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು ಜನನಿಬಿಢತೆ ಹೊಂದಿರುವ ಪ್ರದೇಶಗಳು, ಉತ್ಸವ ಇತ್ಯಾದಿ ಆಚರಣೆಗಳು ನಡೆಯುತ್ತಿರುವ ಪ್ರದೇಶಗಳಲ್ಲಿ ಹೆಚ್ಚಾಗಿ ಮೊಬೈಲ್ ಫೋನ್‌ಗಳು ನಷ್ಟಗೊಳ್ಳುತ್ತಿವೆ. ಇದರ ಹೊರತಾಗಿ ಮೊಬೈಲ್ ಫೋನ್‌ಗಳನ್ನು ಕಳವುಗೈಯ್ಯುವ ತಂಡವೂ ಜಿಲ್ಲೆಯಲ್ಲಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಜಿಲ್ಲೆಯಿಂದ ಕಳವುಗೈಯ್ಯಲಾಗುತ್ತಿರುವ ಮೊಬೈಲ್ ಫೋನ್‌ಗಳನ್ನು ಇತರ ರಾಜ್ಯಗಳಿಗೆ ಸಾಗಿಸಿ ಅದನ್ನು ಅಲ್ಲಿನ ಅಂಗಡಿಗಳಲ್ಲಿ ಮಾರಾಟ ಮಾಡುವ ಕಳ್ಳರ ತಂಡವೂ ಇಲ್ಲಿ ಕಾರ್ಯವೆಸಗುತ್ತಿದೆ. ಹೀಗೆ ಮಾರಾಟ ಮಾಡಲಾದ ಹಲವು ಮೊಬೈಲ್ ಫೋನ್‌ಗಳನ್ನು ಪೊಲೀಸರು ಪತ್ತೆಹಚ್ಚಿ ಅದರ ಮಾಲಕರಿಗೆ ಹಿಂತಿರುಗಿಸಿದ್ದಾರೆ.
ಹೊಸ ಮೊಬೈಲ್ ಫೋನ್‌ಗಳನ್ನು ಕಳವುಗೈಯ್ಯುವ ತಂಡಗಳೂ ಸಕ್ರಿಯವಾಗಿವೆ. ಸ್ನೇಹಿತರೋರ್ವರಿಗೆ ಉಡುಗೊರೆಯಾಗಿ ನೀಡಲೆಂದು ಒಂದು ಲಕ್ಷ ರೂ.ಗಿಂತ ಹೆಚ್ಚು ಮೌಲ್ಯದ ಮೊಬೈಲ್ ಫೋನ್ ಗಲ್ಫ್‌ನಿಂದ ಖರೀದಿಸಿ ಊರಿಗೆ ಹಿಂತಿರುಗಿದ ಕಾಸರಗೋಡು ನಿವಾಸಿಯೋರ್ವರು ಊರಿಗೆ ಬಂದ ನಂತರ ಆ ಮೊಬೈಲ್ ಫೋನ್ ಪ್ಯಾಕೆಟ್ ಬಿಚ್ಚಿ ನೋಡಿದಾಗ ಅದರಲ್ಲಿ ಮೊಬೈಲ್ ಫೋನ್ ಇರಲಿಲ್ಲ. ತಕ್ಷಣ ಅವರು ದುಬೈಯಲ್ಲಿರುವ ತನ್ನ ಸ್ನೇಹಿತರನ್ನು ಕರೆದರೂ ಅವರಿಂದ ಸ್ಪಷ್ಟ ಮಾಹಿತಿ ಲಭಿಸದಿದ್ದಾಗ ಅವರು ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಸೈಬರ್ ಪೊಲೀಸರು ಆ ಬಗ್ಗೆ ತನಿಖೆ ನಡೆಸಿದಾಗ ಆ ಫೋನನ್ನು ದುಬೈಯಲ್ಲಿ ಭಾರತೀಯ ಸಿಮ್ ಉಪಯೋಗಿಸಿ ಕೇರಳದ ಓರ್ವ ಉಪಯೋಗಿಸುತ್ತಿರುವುದನ್ನು ಪತ್ತೆಹಚ್ಚಿದ್ದಾರೆ. ಅದರಂತೆ ಪೊಲೀಸರು ಆತನನ್ನು ಸಂಪರ್ಕಿಸಿದಾಗ ನಾನು ಈ ಮೊಬೈಲ್ ಫೋನನ್ನು ಅಂಗಡಿ ಯೊಂದರಿಂದ ಖರೀದಿಸಿದ್ದೆ ಎಂದು ಆತ ಪೊಲೀಸರಲ್ಲಿ ತಿಳಿಸಿದ್ದಾನೆ. ಅಂದರೆ ಫೋನ್ ನಷ್ಟಗೊಂಡ ಕಾಸರಗೋಡು ನಿವಾಸಿಯ ಆ ಮೊಬೈಲ್ ಫೋನನ್ನು ವಿಮಾ ದೊಳಗೇ ಯಾರೋ ಕಳವುಗೈದಿರುವುದಾಗಿ ಸಂಶಯಿಸಲಾಗುತ್ತಿದೆ ಎಂದೂ ಪೊಲೀಸರು ಹೇಳುತ್ತಿದ್ದಾರೆ.
ಫೋನ್ ನಷ್ಟಗೊಂಡಲ್ಲಿ ಆ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಬೇಕು. ‘ತುಣ’ ಎಂಬ ಪೋರ್ಟಲ್ ಮೂಲಕವೂ ದೂರು ಸಲ್ಲಿಸಬಹುದು. ನಷ್ಟಗೊಂಡ ಫೋನಿನ ಡ್ಯೂಪ್ಲಿಕೇಟ್ ಸಿಮ್ ಕಾರ್ಡ್ ಪಡೆದು ದೂರು ನೀಡುವ ಹಾಗಿದ್ದಲ್ಲಿ ಅದರ ರಶೀದಿ, ಗುರುತುಚೀಟಿ ನಂಬ್ರದ ಸಹಿತ ಸಿಇಐಆರ್ ಅಥವಾ ಸಂಚಾರ್ ಸಾಥಿ ಮೊಬೈಲ್ ಆಪ್ ಉಪಯೋಗಿಸಿ ಲೋಸ್ಟ್ ಮೊಬೈಲ್ ಫೋನ್ ಪೋರ್ಟಲ್‌ನಲ್ಲಿ ನೋಂದಾವಣೆ ನಡೆಸಬೇಕು. ಡ್ಯೂಪ್ಲಿಕೇಟ್ ಸಿಮ್ ಪಡೆದ ಬಳಿಕ ಅದರ ಮೆಸೇಜ್ ಸಿಸ್ಟಮ್ ಆಕ್ಟಿವೇಷನ್ ಆದ ಬಳಿಕವಷ್ಟೇ ಆಪ್ ಉಪಯೋಗಿಸಿ ರಿಜಿಸ್ಟ್ರೇಷನ್ ನಡೆಸಲು ಸಾಧ್ಯವಾಗಲಿದೆ. ನಷ್ಟಗೊಂಡ ಫೋನ್‌ನನ್ನು ಬೇರೆ ಯಾರಾದರೂ ಅದಕ್ಕೆ ಬೇರೆ ಸಿಮ್ ಬಳಸಿ ಉಪಯೋಗಿಸುತ್ತಿದ್ದಲ್ಲಿ ಆ ಬಗ್ಗೆ ಮೆಸೇಜ್ ಲಭಿಸಲಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ.