ಹೆದ್ದಾರಿ ನಿರ್ಮಾಣ ಪ್ರಗತಿ: ಕುಂಬಳೆ ಪೇಟೆಯ ಬಾಗಿಲು ಮುಚ್ಚದಿರಿ; ಸ್ಥಳೀಯರಿಂದ ವಿವಿಧ ಮನವಿ
ಕುಂಬಳೆ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪ್ರಗತಿಯಲ್ಲಿರುವಂತೆ ಹೆದ್ದಾರಿ ಬದಿಯ ಪ್ರಮುಖ ವ್ಯಾಪಾರ ಕೇಂದ್ರವಾದ ಕುಂಬಳೆಗೆ ದಾರಿ ಮೊಟಕ ಗೊಳಿಸಬಾರದೆಂಬ ಬೇಡಿಕೆಯೊಂದಿಗೆ ಜನಪ್ರತಿನಿಧಿಗಳು, ರಾಜಕೀಯದವರು, ಸ್ಥಳೀಯರು, ವ್ಯಾಪಾರಿಗಳು ರಂಗಕ್ಕಿಳಿದಿದ್ದಾರೆ. ಕುಂಬಳೆ ಪೇಟೆಯ ಮೂಲಕ ಸಾಗುವ ಷಟ್ಪಥ ಪೂರ್ತಿಗೊಂಡರೆ ಪೇಟೆಗಿರುವ ದಾರಿ ಮುಚ್ಚಲಿದೆ ಎಂದು ಸ್ಥಳೀಯರು ಹಾಗೂ ವ್ಯಾಪಾರಿಗಳು ಈ ಮೊದಲೇ ದೂರಿದ್ದರು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಆರಂಭಗೊಂಡಾಗಿನಿಂದ ಸ್ಥಳೀಯರು ಹಾಗೂ ವ್ಯಾಪಾರಿಗಳು ಈ ಆತಂಕವನ್ನು ವ್ಯಕ್ತಪಡಿಸಿದ್ದು, ಆದರೆ ಸಂಬಂಧಪಟ್ಟವರು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲವೆಂಬ ಆರೋಪವಿದೆ. ಜಿಲ್ಲೆಯಲ್ಲಿ ಯಾವುದೇ ಪೇಟೆಯನ್ನು ಮುಚ್ಚಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಎಲ್ಲಿಯೂ ನಡೆದಿಲ್ಲವೆಂದು ವ್ಯಾಪಾರಿಗಳು ತಿಳಿಸುತ್ತಿದ್ದು, ಕುಂಬಳೆಯಲ್ಲಿ ಮಾತ್ರ ಈ ಅವಸ್ಥೆ ಇದೆ ಎಂದು ಅವರು ನುಡಿದಿದ್ದಾರೆ. ಈ ವಿಷಯದಲ್ಲಿ ಪೇಟೆಯಲ್ಲೇ ನೆಲೆಗೊಂಡಿರುವ ಪಂಚಾಯತ್ ಕೂಡಾ ಸಾಕಷ್ಟು ಗಮನ ಹರಿಸಿಲ್ಲ ಎಂಬ ಆರೋಪವು ಕೇಳಿ ಬರುತ್ತಿದೆ. ಪೇಟೆಗಿರುವ ದಾರಿಯನ್ನು ಮುಚ್ಚಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪೂರ್ತಿಯಾದರೆ ಪೇಟೆಯಲ್ಲಿ ಉಂಟಾಗಬಹುದಾದ ಸಂಕಷ್ಟಗಳ ಬಗ್ಗೆ ವಿವರಿಸಿ ಕೇಂದ್ರ ಸಚಿವರಿಗೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ, ಜನಪ್ರತಿನಿಧಿಗಳಿಗೆ ಜಿಲ್ಲೆಯ ವಿವಿಧ ರಾಷ್ಟ್ರೀಯ ಸಂಘಸಂಸ್ಥೆಗಳಿಗೆ ಸ್ಥಳೀಯರು ಹಾಗೂ ವ್ಯಾಪಾರಿಗಳು ಮನವಿಯನ್ನು ನೀಡುತ್ತಲೇ ಇದ್ದಾರೆ. ಕುಂಬಳೆಯ ಕೈಗಾರಿಕೆ ವಾಣಿಜ್ಯ ಕೇಂದ್ರಗಳಾದ ಎಚ್‌ಎಎಲ್, ಕಿನ್ಫ್ರಾ, ಅನಂತಪುರ ಎಂಬೆಡೆಗಳಿಗೆ ಸರಕು ಸಾಗಾಟ ವಾಹನಗಳು ಪೇಟೆ ಮೂಲಕ ಸಾಗಲು ಈಗ ಇರುವ ನಿರ್ಮಾಣದಿಂದ ಬಹಳ ಕಷ್ಟಪಡಬೇಕಾಗಿ ಬರಲಿದೆ. ವಾಹನ ಅಪಘಾತಗಳು ಸಂಭವಿಸಿದಾಗ ಪೊಲೀಸರ ವಾಹನಗಳು, ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಕೊಂಡೊಯ್ಯುವ ಆಂಬುಲೆನ್ಸ್‌ಗಳು, ಅಗ್ನಿ ಆಕಸ್ಮಿಕ ಸಂಭವಿಸಿದರೆ ಅಗ್ನಿ ಶಾಮಕದಳ ಯಥಾ ಸಮಯ ಪೇಟೆಯ ವಿವಿಧ ಭಾಗಗಳಿಗೆ ತಲುಪಲು ಕಾಲವಿಳಂಬ ಉಂಟಾಗಲಿದೆ.
ಪ್ರಸಿದ್ಧವಾದ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ಕ್ಷೇತ್ರ, ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಮೊದಲಾದ ಕೇಂದ್ರಗಳಿಗೆ ಭಕ್ತರಿಗೆ ಸುಲಭದಲ್ಲಿ ತಲುಪಲು ಸಮಸ್ಯೆಯಾಗಲಿದೆ. ಈ ವಿಷಯವನ್ನೆಲ್ಲಾ ವಿವರಿಸಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಇತ್ತೀಚೆಗೆ ನೇರವಾಗಿ ಮನವಿ ನೀಡಿದ್ದರು. ಇದರ ಹೊರತಾಗಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಇ-ಮೇಲ್ ಮೂಲಕ ದೂರು ನೀಡಿದ್ದಾರೆ. ಮೊಗ್ರಾಲ್ ದೇಶೀಯವೇದಿ ಕೇಂದ್ರ ಸಚಿವರಿಗೆ, ಸಂಸದರಿಗೆ ಈ ಮೊದಲು ಮನವಿ ನೀಡಿತ್ತು.