ಹೊಳೆಗಳಿಂದ ಅನಧಿಕೃತ ಹೊಯ್ಗೆ ಸಾಗಾಟ ಮತ್ತೆ ವ್ಯಾಪಕ: ನೀರಿನಲ್ಲಿ ಮುಳುಗಿಸಿಟ್ಟ ಐದು ದೋಣಿಗಳ ನಾಶ
ಕುಂಬಳೆ: ಬಿಲಿಸಿನ ಉಷ್ಣತೆಯಿಂದ ಹೊಳೆಗಳಲ್ಲಿ ನೀರು ಬತ್ತುತ್ತಿರುವಾಗ ಅಲ್ಲಿಂದ ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸಿ ಸಾಗಾಟ ನಡೆಸುವ ದಂಧೆ ಮತ್ತೆ ವ್ಯಾಪಕಗೊಂಡಿದೆ. ಶಿರಿಯ ಹೊಳೆಯ ಉಳುವಾರು ಮಾಕೂರು, ಮೊಗ್ರಾಲ್ ಕೆ.ಕೆ.ಪುರ, ಪಚ್ಚಂಬ ಮೊದಲಾದೆಡೆಗಳಲ್ಲಿ ಹೊಳೆಗಳಿಂದ ಹೊಯ್ಗೆ ಸಂಗ್ರಹ, ಸಾಗಾಟ ತೀವ್ರಗೊಂಡಿದೆ.
ಕುಂಬಳೆ ಠಾಣೆಯ ಎಸ್‌ಐಗಳಾದ ಟಿ.ಎಂ. ವಿಪಿನ್, ಅಡಿಶನಲ್ ಎಸ್‌ಐ ಉಮೇಶ್, ಸಿಪಿಒಗಳಾದ ಮನೋಜ್, ಅನುರಾಜ್ ನಿನ್ನೆ ನಡೆಸಿದ ಕಾರ್ಯಾ ಚರಣೆಯಲ್ಲಿ ಹೊಯ್ಗೆ ಸಂಗ್ರಹಕ್ಕೆ ಬಳಸುತ್ತಿದ್ದ ಐದು ದೋಣಿಗಳನ್ನು ನಾಶಪಡಿಸಲಾಗಿದೆ. ಶಿರಿಯ ಹೊಳೆಯ ಉಳುವಾರು ಮಾಕೂರು ಎಂಬಲ್ಲಿ ದೋಣಿಗಳನ್ನು ನೀರಿನೊಳಗೆ ಮುಳು ಗಿಸಿಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಅವುಗಳನ್ನು ದಡಕ್ಕೆ ತಲುಪಿಸಿದ ಬಳಿಕ ಜೆಸಿಬಿ ಬಳಸಿ ಪುಡಿಗೈಯ್ಯಲಾಗಿದ. ಅದೇ ರೀತಿ ಬದ್ರಿಯಾನಗರದ ಮೂಲಕ ಅನಧಿಕೃತ ಹೊಯ್ಗೆ ಸಾಗಿಸುತ್ತಿದ್ದ ಲಾರಿಯನ್ನು ವಶಪಡಿಸಲಾಗಿದೆ. ಜಿಲ್ಲಾಧಿಕಾರಿ ಕೆ. ಇಂಭಶೇಖರ್ ನಿನ್ನೆ ಮುಂಜಾನೆ ಮೊಗ್ರಾಲ ಕೆ.ಕೆ. ಪುರದಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಹೊಯ್ಗೆ ಸಹಿತ ಟಿಪ್ಪರ್ ಲಾರಿ ಬಂದಿತ್ತು. ಅದನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರೂ ಲೆಕ್ಕಿಸದೆ ಲಾರಿ ಪರಾರಿಯಾಗಿದೆ. ಪರಾರಿ ವೇಳೆ ಈ ಲಾರಿ ದೂರವಾಣಿಯ ಕಂಬವೊಂ ದಕ್ಕೆ ಢಿಕ್ಕಿ ಹೊಡೆದಿರುವುದಾಗಿ ತಿಳಿದುಬಂದಿದೆ. ಆ ಲಾರಿಯ ಕುರಿತು ಮಾಹಿತಿ ಸಂಗ್ರಹಿಸಿದ ಕುಂಬಳೆ ಪೊಲೀಸರು ಶೋಧ ನಡೆಸಿದರೂ ಪತ್ತೆಹಚ್ಚಲಾಗಿಲ್ಲ. ಈ ಬಗ್ಗೆ ಕೇಸು ದಾಖಲಿಸಿಕೊಂಡ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಅಲ್ಲದೆ ಕೆಕೆ ಪುರ ಕಡವಿಗೆ ಬರುತ್ತಿದ್ದ ಬೇರೊಂದು ಟಿಪ್ಪರ್ ಲಾರಿಯನ್ನು ವಶಪಡಿಸಲಾಗಿದೆ.
ಕಾಸರಗೋಡು ಡಿವೈಎಸ್ಪಿ ನಿನ್ನೆ ಪಚ್ಚಂಬಳ ಪಾಚಾಣಿ ಎಂಬಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಹೊಯ್ಗೆ ಸಾಗಾಟಕ್ಕೆ ಬರುತ್ತಿದ್ದ ೨ ಟಿಪ್ಪರ್ ಲಾರಿಗಳನ್ನು ವಶಪಡಿಸಲಾಗಿದೆ.