107 ಗ್ರಾಂ ಎಂಡಿಎಂಎ ಪತ್ತೆ : ಇಬ್ಬರು ಯುವಕರ ಸೆರೆ

ಬದಿಯಡ್ಕ: ಅಮಲು ಪದಾರ್ಥ ತಡೆ ಹಾಗೂ ಪತ್ತೆಗಾಗಿ ಪೊಲೀಸರು ಆರಂಭಿಸಿರುವ ಕೊಂಬಿಂಗ್ ಕಾರ್ಯಾ ಚರಣೆಯಲ್ಲಿ ಎಂಡಿಎಂಎ ಸಹಿತ ಇಬ್ಬರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಬದಿಯಡ್ಕ ನಾರಂಪಾಡಿ ಪ್ಲಾವಿಂಡಡಿ ರಫೀಕ್ ಮಂಜಿಲ್‌ನ ಮೊಹಮ್ಮದ್ ರಫೀಕ್ (23), ಬದಿಯಡ್ಕ ಮೂಕಂಪಾರೆಯ ಅಲೆಕ್ಸ್ ಚಾಕೋ ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಮೊಹಮ್ಮದ್ ರಫೀಕ್‌ನ ಮನೆಯಲ್ಲಿ ಬಚ್ಚಿಟ್ಟಿದ್ದ 107.090 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮೊಹಮ್ಮದ್ ರಫೀಕ್ ನೀಡಿದ ಮಾಹಿತಿಯಂತೆ ಬಳಿಕ ಅಲೆಕ್ಸ್ ಚಾಕೋನನ್ನು ಬಂಧಿಸಲಾಗಿದೆ.

ಕೊಂಬಿಂಗ್ ಕಾರ್ಯಾಚರಣೆಗಾಗಿ ನೀರ್ಚಾಲ್‌ಗೆ ತಲುಪಿದಾಗ ಆರೋಪಿಯ ಮನೆಯಲ್ಲಿ ಅಮಲು ಪದಾರ್ಥ ಬಚ್ಚಿಟ್ಟಿರುವ ಗುಪ್ತ ಮಾಹಿತಿ ನಮಗೆ ಲಭಿಸಿದೆ. ಅದರಂತೆ ಆತನ ಮನೆಗೆ ತೆರಳಿ ನಡೆಸಿದ ತಪಾಸಣೆಯಲ್ಲಿ ಆತ ಮಲಗುವ ಕೊಠಡಿಯ ಹಾಸಿಗೆಯ ಕೆಳ ಭಾಗದಲ್ಲಿ ಎಂಡಿಎಂಎ ಬಚ್ಚಿಟ್ಟಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿ ನೀಡಿದ ನಿರ್ದೇಶ ಪ್ರಕಾರ, ವಿದ್ಯಾನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಯು.ವಿ. ವಿಪಿನ್‌ರ ಮೇಲ್ನೋಟದಲ್ಲಿ ಬದಿಯಡ್ಕ ಪೊಲೀಸ್ ಠಾಣೆಯ ಹೊಣೆಗಾರಿಕೆಯನ್ನೂ ಹೊಂದಿರುವ ವಿದ್ಯಾನಗರ ಎಸ್‌ಐ ಪ್ರತೀಷ್ ಕುಮಾರ್ ಎಂ.ಪಿ, ಬದಿಯಡ್ಕ ಪೊಲೀಸ್ ಠಾಣೆಯ ಪ್ರೊಬೇಷನರಿ ಎಸ್‌ಐ ರಾಧಾಕೃಷ್ಣನ್, ಸಿಪಿಒ ಅನಿತಾ ಎಂಬವರನ್ನೊಳಗೊಂಡ ಪೊಲೀಸರ ತಂಡ  ಆರೋಪಿಯ ಮನೆಯಲ್ಲಿ ಈ ಕಾರ್ಯಾಚರಣೆ ನಡೆಸಿ ಅಮಲು ಪದಾರ್ಥ ವಶಪಡಿಸಿಕೊಂ ಡಿದೆ. ಅಬಕಾರಿ ಸರ್ಕಲ್ ಇನ್ಸ್ ಪೆಕ್ಟರ್ ಅರುಣ್‌ರ ಸಾನ್ನಿಧ್ಯದಲ್ಲಿ ಆರೋಪಿಯ ದೇಹ ತಪಾಸಣೆಯನ್ನು ನಡೆಸಿ ಪೊಲೀಸರು ಮುಂದಿನ ಅಗತ್ಯದ ಕ್ರಮಗಳನ್ನು ಪೂರ್ತೀಕರಿಸಿದ್ದಾರೆ.

You cannot copy contents of this page