ಕಾಸರಗೋಡು: ಕಾರಗುಳಿಗನ್ ದೈವವನ್ನು ಕಾಣಲೆಂದು ತೆರಳಿದ 15ರ ಹರೆಯದ ಬಾಲಕನ ಕಾಲಿಗೆ ಪಟಾಕಿ ಸಿಡಿದು ಗಾಯವುಂಟಾಗಿದೆ. ಈ ಬಗ್ಗೆ ಪ್ರಶ್ನಿಸಿದ ಬಾಲಕ ಹಾಗೂ ಹೆತ್ತವರನ್ನು ಹೊಡೆದು ಹಲ್ಲೆಗೈದ ಮೂರು ಮಂದಿ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ. ಉಪ್ಪಿಲಕೈ ಅಡುಕ್ಕತ್ಪರಂಬಿಲ್ನ 15ರ ಹರೆಯದ ಬಾಲಕನ ದೂರಿನಂತೆ ಪುದುಕೈ ನಿವಾಸಿಗಳಾದ ಅಭಿಲಾಷ್, ಶಿಬು, ಶಿಬಿನ್ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಇಂದು ಮುಂಜಾನೆ 1 ಗಂಟೆ ವೇಳೆಗೆ ಚತುರಕಿಣರ್ ಕಾರಗುಳಿಗನ್ ದೈವಸ್ಥಾನದ ಸಮೀಪ ಘಟನೆ ನಡೆದಿದೆ.
ದೈವ ಕಾಣಲೆಂದು ಬಾಲಕ ಇಲ್ಲಿಗೆ ತಲುಪಿದ್ದನು. ಈ ವೇಳೆ ಪಟಾಕಿ ಸಿಡಿಸಲಾಗಿದ್ದು, ಅದು ಸ್ಫೋಟಿಸಿ 15ರ ಹರೆಯದ ಬಾಲಕನ ಕಾಲಿಗೆ ತಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನು ಪ್ರಶ್ನಿಸಿದಾಗ ಅಭಿಲಾಷ್ ಅಸಭ್ಯ ನುಡಿದು ಬಲ ಕಿವಿಗೆ ಹೊಡೆದಿರುವುದಾಗಿಯೂ ದೂರಿನಲ್ಲಿ ಹೇಳಲಾಗಿದೆ. ದೂಡಿ ಹಾಕಿದ ಬಳಿಕ ಮತ್ತೆಯೂ ಆಕ್ರಮಣ ನಡೆಸಿದ್ದು ಮಾತ್ರವಲ್ಲದೆ, ತಡೆಯಲು ಯತ್ನಿಸಿದ ದೂರುದಾರನ ತಂದೆ ಪ್ರದೀಪ್ನನ್ನು ಮೂರು ಮಂದಿ ಸೇರಿ ಹಲ್ಲೆಗೈದಿರುವು ದಾಗಿ ದೂರಲಾಗಿದೆ. ಇದನ್ನು ನೋಡಿ ತಡೆಯಲೆತ್ನಿಸಿದ ತಾಯಿಗೂ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಜೊತೆಗೆ ಮಾವನ ಮಗ ಸನೀಶ್ಗೂ ಕಬ್ಬಿಣದ ಲಿವರ್ನಿಂದ ಹೊಡೆದು ಗಾಯಗೊಳಿಸಿರುವುದಾಗಿಯೂ ಹೊಸದುರ್ಗ ಪೊಲೀಸರು ದಾಖಲಿಸಿದ ಕೇಸಿನಲ್ಲಿ ಹೇಳಲಾಗಿದೆ.






