16ರ ಬಾಲಕನ ಕೈ ತೋಳಿನಲ್ಲಿ 13 ಸೆಂಟಿ ಮೀಟರ್ ಉದ್ದದ ಹುಳ: ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ
ಕಾಸರಗೋಡು: 16ರ ಹರೆಯದ ಬಾಲಕನ ಕೈ ತೋಳಿನಿಂದ ಶಸ್ತ್ರ ಚಿಕಿತ್ಸೆ ಮೂಲಕ 13 ಸೆಂಟಿಮೀಟರ್ ಉದ್ದದ ಅತ್ಯಪೂರ್ವ ರೀತಿಯ ಹುಳವನ್ನು ವೈದ್ಯರು ಹೊರತೆಗೆದಿದ್ದಾರೆ.
ಚೆಂಗಳ ಇ.ಕೆ. ನಾಯನಾರ್ ಆಸ್ಪತ್ರೆಯ ಆರ್ಥೋಪೀಡಿಕ್ ಸರ್ಜನ್‌ಗಳಾದ ವಿಶಾಖ್ ಕರಿಚ್ಚೇರಿ, ಹರಿಕಿರಣ್ ಬಂಗೇರ ಎಂಬವರ ನೇತೃತ್ವದಲ್ಲಿ ೨ ಗಂಟೆ ಕಾಲ ನಡೆದ ಶಸ್ತ್ರಚಿಕಿತ್ಸೆ ಮೂಲಕ ಈ ಅಪೂರ್ವ ರೋಗಾಣುವಾದ ಹುಳವನ್ನು ಹೊರತೆಗೆಯಲಾಗಿದೆ.
ಒಂದು ವರ್ಷದಿಂದ ಬಾಲಕನಿಗೆ ಕೈನೋವು ಅನುಭವಕ್ಕೆ ಬಂದಿತ್ತು. ಕಳೆದ ಮೂರು ತಿಂಗಳಿಂದ ಅಸಹನೀಯ ನೋವು ಉಂಟಾದುದರಿಂದ ವೈದ್ಯರನ್ನು ಭೇಟಿಯಾಗಿದ್ದನು. ಸ್ಕ್ಯಾನ್ ನಡೆಸಿ ಪರಿಶೀಲಿಸಿದಾಗ ಕೈ ತೋಳಿನಲ್ಲಿ ಡಿರೋ ಫೈಲೇರಿಯ ಬಾಧಿಸಬಹು ದಾದ ಹುಳ ಬೆಳೆಯುತ್ತಿರುವುದು ಕಂಡುಬಂದಿದೆ. ಈ ರೋಗಾಣು ಹುಳ ಸಾಮಾನ್ಯವಾಗಿ ಕಾಲುಗಳಲ್ಲಿ ಕಂಡುಬರುತ್ತಿದೆ. ಅದು ಆನೆಕಾಲು ರೋಗಕ್ಕೆ ಕಾರಣವಾಗುತ್ತಿದೆಯೆಂದು ವೈದ್ಯರು ತಿಳಿಸುತ್ತಿದ್ದಾರೆ. ಆದರೆ ಕೈತೋಳಿನಲ್ಲಿ ಹುಳ ಕಂಡುಬರುವುದು ಅಪೂರ್ವವಾಗಿದೆಯೆಂದು ಹೇಳಲಾಗುತ್ತಿದೆ.