ಮಕ್ಕಳಿಲ್ಲದ ಮನೆಯಲ್ಲಿ 26 ದಿನದ ಮಗು ಪತ್ತೆ: ನಿಗೂಢತೆ ವ್ಯಕ್ತಪಡಿಸಿದ ನಾಗರಿಕರು; ಪೊಲೀಸ್ ತನಿಖೆ ಆರಂಭ

ಕಾಸರಗೋಡು: ಮಕ್ಕಳಿಲ್ಲದ ಮನೆಯಲ್ಲಿ ೨೬ ದಿನ ಪ್ರಾಯದ ಮಗು ಕಂಡುಬಂದಿರುವುದು ನಾಗರಿಕರಲ್ಲಿ ಆಶ್ಚರ್ಯ ಮೂಡಿಸಿದೆ. ಈ ವಿಷಯ ನಾಡಿನಾದ್ಯಂತ ಸುದ್ಧಿಯಾಗುವುದರೊಂದಿಗೆ ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ. ಮಗುವಿನ ಸ್ವಂತ ತಾಯಿ ಹಾಗೂ ಸಾಕುತಾಯಿಯನ್ನು ಪೊಲೀಸರು ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸಿದ ಬಳಿಕ ಮಗುವನ್ನು ಸ್ವಂತ ತಾಯಿಗೆ ನೀಡಿ ಕಳುಹಿಸಿರುವುದಾಗಿ ತಿಳಿದು ಬಂದಿದೆ. ಮಗುವನ್ನು ಮಾರಾಟಗೈಯ್ಯಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಗುವನ್ನು ಮಾರಾಟಗೈದ ಹಾಗೂ ಖರೀದಿಸಿದ ಬಗ್ಗೆ ಯಾವುದೇ ದೂರುಗಳು ಲಭಿಸಿಲ್ಲ. ಅಲ್ಲದೆ ಈ ವಿಷಯದಲ್ಲಿ ದೂರು ನೀಡಲು ಯಾರೂ ಸಿದ್ಧರಾಗದ ಹಿನ್ನೆಲೆಯಲ್ಲಿ ತನಿಖೆ ಮೂಲೆಗುಂಪಾಗಲಿದೆಯೇ ಎಂಬ ಸಂಶಯ ಕೂಡಾ ಹುಟ್ಟಿಕೊಂಡಿದೆ.

ಪಡನ್ನ ಬಳಿಯ ಒಂದು ಮನೆಯಲ್ಲಿ ಮಗು ಕಂಡುಬಂದಿದೆ. ಸಂಶಯ ಉಂಟಾದ ಹಿನ್ನೆಲೆಯಲ್ಲಿ ಆ ಮನೆಗೆ ನಾಗರಿಕರು ನೇರವಾಗಿ ತಲುಪಿ ವಿಚಾರಿಸಿದಾಗ ಮನೆಯವರು ವಿಷಯ ತಿಳಿಸಿದ್ದಾರೆ. ಕಣ್ಣೂರು ಪಿಲಾತ್ತರದ ಮನೆಯೊಂದರಲ್ಲಿ ಈ ಮಗು ಜನಿಸಿದೆ ಎಂದೂ, ಪತಿ ಅಲ್ಲದೆ ಬೇರೊಬ್ಬನಿಂದ ಜನಿಸಿದ ಮಗು ಆದುದರಿಂದ ಬೇರಾರೂ ತಿಳಿಯದೆ ಮನೆಯವರು ಮಗುವನ್ನು ಬೆಳೆಸಿದ್ದಾರೆ. ಆ ಮನೆಯಲ್ಲಿ ಕಾರ್ಯಕ್ರಮ ನಡೆಯಲಿರುವುದರಿಂದ ಸಂಬಂಧಿಕರು ತಲುಪಲಿದ್ದು, ಆ ವೇಳೆ ಮಗುವಿನ ಕುರಿತು ಪ್ರಶ್ನಿಸಿದರೆ ಉಂಟಾಗಬಹುದಾದ ಅವಮಾನಕ್ಕೆ ಭಯಗೊಂಡು ಕಾರ್ಯಕ್ರಮ ಮುಗಿಯುವವರೆಗೆ ಮಗುವನ್ನು ಸಂರಕ್ಷಿಸಲು ಪಡನ್ನದ ಮಹಿಳೆಗೆ ನೀಡಿರುವುದಾಗಿ ನಾಗರಿಕರಿಗೆ ಹಾಗೂ ಪೊಲೀಸರಿಗೆ ಲಭಿಸಿದ ಮಾಹಿತಿಯೆಂದು ಹೇಳಲಾಗುತ್ತಿದೆ.

ಪೊಲೀಸರು ಮಗುವಿನ ತಾಯಿ ಹಾಗೂ ಸಾಕು ತಾಯಿಯೊಂದಿಗೆ ಹೇಳಿಕೆ ದಾಖಲಿಸಿಕೊಂಡಿರುವುದಾಗಿ ಮಾಹಿತಿಯಿದೆ. ಇಬ್ಬರು ಕೂಡಾ ಒಂದೇ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆನ್ನಲಾಗಿದೆ. ಮಗುವನ್ನು ಈಗ ಸ್ವಂತ ತಾಯಿಗೆ ನೀಡಿರುವುದಾಗಿ ಹೇಳಲಾಗುತ್ತಿದೆ. ಇದೇ ವೇಳೆ ನಾಗರಿಕರು ಈಗಲೂ ನಿಗೂಢತೆ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಲು ನಿರ್ಧರಿಸಿದ್ದಾರೆ. ಇದೇ ವೇಳೆ ಯಾವುದೇ ದೂರು ಲಭಿಸದ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ನಡೆಸುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.

RELATED NEWS

You cannot copy contents of this page