9 ವರ್ಷದ ಎಡರಂಗ ಆಡಳಿತ ರಾಜ್ಯದ ಸಮಸ್ತ ವಲಯಗಳಲ್ಲೂ ಪರಾಜಯ- ಕೆಪಿಸಿಸಿ ಅಧ್ಯಕ್ಷ
ಕಾಸರಗೋಡು: ಐಕ್ಯ ಪ್ರಜಾಪ್ರಭುತ್ವ ಒಕ್ಕೂಟ ಕೇರಳದಲ್ಲಿ ಅಧಿಕಾರದಲ್ಲಿದ್ದ ಸಮಯದಲ್ಲಿ ಕಾಸರಗೋಡು ಜಿಲ್ಲೆಯ ಸರ್ವತೋಮುಖವಾದ ಅಭಿವೃದ್ಧಿಗೆ ಆದ್ಯತೆ ನೀಡಿ ಯೋಜನೆಗಳನ್ನು ಜ್ಯಾರಿಗೊಳಿಸಲಾಗಿತ್ತು. ಜಿಲ್ಲೆಯ ರೂಪೀಕರಣದಿಂದ ಆರಂಭಿಸಿ ಹೊಸ ತಾಲೂಕುಗಳನ್ನು ಮಂಜೂರುಗೊಳಿಸಿರುವುದು, ಉನ್ನತ ಶಿಕ್ಷಣ ರಂಗದಲ್ಲಿ ಹೆಚ್ಚು ಅವಕಾಶಗಳನ್ನು ಸೃಷ್ಟಿಸಿ ಇಂಜಿನಿಯರಿಂಗ್ ಕಾಲೇಜು, ಸರಕಾರಿ ಕಾಲೇಜುಗಳನ್ನು ಆರಂಭಿಸಿರುವುದು ಯುಡಿಎಫ್ನ ಆಡಳಿತಕಾಲದಲ್ಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ನುಡಿದರು.
ಕೆಪಿಸಿಸಿ ನಡೆಸುವ ಮುಷ್ಕರ ಸಂಗಮದಂಗವಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು ಪುರಭವನದಲ್ಲಿ ನಡೆದ ಸಮರ ಸಂಗಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೇರಳದ ಆರೋಗ್ಯರಂಗ ಮೋರ್ಚರಿಯಲ್ಲಿದೆ ಎಂದು ದೂರಿದ ಅವರು, ಕೋಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆ ಕಟ್ಟಡ ಕುಸಿದು ಬಿದ್ದು ಬಿಂದು ಎಂಬ ಮಹಿಳೆ ಮೃತಪಟ್ಟಿರುವುದು ಆರೋಗ್ಯ ಇಲಾಖೆ ಸಚಿವೆ ಸಹಿತದ ಇಬ್ಬರು ಸಚಿವರ ಉದಾಸೀನತೆಯಿಂದಾಗಿದೆ ಎಂದು ಆರೋಪಿಸಿದರು.
ಆಶಾ ಕಾರ್ಯಕರ್ತೆಯರು ನಾಲ್ಕು ತಿಂಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ಹೀಗಿದ್ದು ಅವರ ಬೇಡಿಕೆಯನ್ನು ಪರಿಗಣಿಸಲು ಸರಕಾರ ಸಿದ್ಧವಾಗದಿರುವುದು ಪ್ರತಿಭಟನಾರ್ಹವೆಂದು ಅವರು ನುಡಿದರು. ಇದೇ ವೇಳೆ ತಮ್ಮ ಇಷ್ಟದವರಿಗೆ ವೇತನ ಎಡರಂಗ ಸರಕಾರ ಹೆಚ್ಚಿಸಿದೆ ಎಂದು ದೂರಿದರು.
ಸಮೀಪದಲ್ಲೇ ಇರುವ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯುವ ಚುನಾವಣೆಯಲ್ಲಿ ಎಡ ಆಡಳಿತದ ವಿರುದ್ಧ ಕೇರಳ ಜನತೆ ಪ್ರತಿಕ್ರಿಯಿಸುವರು ಎಂದು ಅವರು ನುಡಿದರು. ತೀವ್ರವಾದ ಬೆಲೆಯೇರಿಕೆ, ನಿರುದ್ಯೋಗ, ಹಿಂಬಾಗಿಲ ನೇಮಕಾತಿ, ಕೃಷಿ ವಲಯದ ಸಂದಿಗ್ಧತೆ, ಕಾಡುಮೃಗಗಳ ಆಕ್ರಮಣ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರ ಸೌಲಭ್ಯಗಳ ಕಸಿದಿರುವುದು, ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಅವ್ಯವಹಾರ, ಪಿಂಚಣಿ ಮೊಟಕು, ಮಾದಕ ಪದಾರ್ಥ ಮಾಫಿಯಾಗಳ ದಬ್ಬಾಳಿಕೆಗಳೆಲ್ಲವೂ ಆಡಳಿತದ ಪರಾಜಯವನ್ನು ಎತ್ತಿ ತೋರಿಸುತ್ತಿರುವುದಾಗಿ ಅವರು ನುಡಿದರು. ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಅಧ್ಯಕ್ಷತೆ ವಹಿಸಿದರು. ಯುಡಿಎಫ್ ಸಂಚಾಲಕ ಅಡೂರ್ ಪ್ರಕಾಶ್, ಕೆಪಿಸಿಸಿ ವರ್ಕಿಂಗ್ ಪ್ರೆಸಿಡೆಂಟ್ಗಳಾದ ಎ.ಪಿ. ಅನಿಲ್ ಕುಮಾರ್, ಶಾಫಿ ಪರಂಬಿಲ್, ಸಂಸದ ರಾಜ್ಮೋಹನ್ ಉಣ್ಣಿತ್ತಾನ್, ಪ್ರಧಾನ ಕಾರ್ಯದರ್ಶಿ ಸೋನಿ ಸೆಬಾಸ್ಟಿಯನ್, ಮುಖಂಡರಾದ ಹಕೀಂ ಕುನ್ನಿಲ್, ಕೆ. ನೀಲಕಂಠನ್, ಸುಬ್ಬಯ್ಯ ರೈ, ಎ. ಗೋವಿಂದನ್ ನಾಯರ್, ಸೋಮಶೇಖರ ಶೇಣಿ, ಸುಂದರ ಆರಿಕ್ಕಾಡಿ, ಗೀತಾಕೃಷ್ಣನ್, ಡಿಎಂಕೆ ಮೊಹಮ್ಮದ್ ಸಹಿತ ಹಲವರು ಮಾತನಾಡಿದರು.