ಚರಂಡಿಗೆ ಬಿದ್ದು ಗಾಯಗೊಂಡ ಪತಿಯನ್ನು ಕಂಡ ಪತ್ನಿ ಕುಸಿದುಬಿದ್ದು ಸಾವು

ಕಾಸರಗೋಡು: ಚರಂಡಿಗೆ ಬಿದ್ದು ಗಾಯಗೊಂಡ ಪತಿಯನ್ನು ಕಂಡು ಪತ್ನಿ ಕುಸಿದುಬಿದ್ದು ಸಾವನ್ನಪ್ಪಿದ  ಘಟನೆ ನಡೆದಿದೆ. ಹೊಸದುರ್ಗ ಶ್ರೀಕೃಷ್ಣ ದೇವಸ್ಥಾನ ಬಳಿಯ ದೀಪಾ ನಿವಾಸದ ಮೀರಾ ಕಾಮ್‌ದೇವ್ (65) ಎಂಬವರು ಸಾವನ್ನಪ್ಪಿದ ಮಹಿಳೆ.

ಇವರ ಪತಿ ಎಚ್.ಎನ್. ಕಾಮದೇವ್ (31) ನಿನ್ನೆ ಬೆಳಿಗ್ಗೆ  ಅಲ್ಲೇ ಪಕ್ಕದ ಶ್ರೀಕೃಷ್ಣ ದೇವಸ್ಥಾನ ಬಳಿಯ ರಾಜ್ಯ ಹೆದ್ದಾರಿಯ ಬಳಿ ನಡೆದುಕೊಂಡು ಹೋಗುತ್ತಿದ್ದ ವೇಳೆ ರಸ್ತೆ ಬದಿಯ ಆಳದ ಚರಂಡಿಗೆ ಬಿದ್ದು ಗಾಯಗೊಂಡಿದ್ದರು. ಅದನ್ನು ಕಂಡ ಊರವರು ತಕ್ಷಣ ಅವರನ್ನು ಚರಂಡಿಯಿಂದ ಮೇಲಕ್ಕೆತ್ತಿ ಮನೆಗೆ ಸಾಗಿಸಿದ್ದಾರೆ. ಬಿದ್ದ ಆಘಾತಕ್ಕೆ ಕಾಮದೇವ್‌ರ ಕೈಗೆ ಗಾಯವುಂಟಾಗಿತ್ತು. ದೇಹವಿಡೀ ಚರಂಡಿಯ ಕೆಸರು ಆವರಿಸಿತ್ತು. ಅದನ್ನು ಕಂಡ ಪತ್ನ ಮೀರಾ ಅಲ್ಲೇ ಕುಸಿದುಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಅಲ್ಪ ಸಮಯದಲ್ಲಿ ಅವರು ಸಾವನ್ನಪ್ಪಿದರು. ಮೃತರು ಪತಿಯ ಹೊರತಾಗಿ ಮಕ್ಕಳಾದ ರಾಜೇಶ್, ದೀಪಾ ರಮೇಶ್, ಶಿಲ್ಪಾವಿಷ್ಣು,  ಅಳಿಯ-ಸೊಸೆಯಂದಿರಾದ ಸಂಧ್ಯಾ, ಆರ್. ರಮೇಶ್, ವಿಷ್ಣುರಾಜಶೇಖರ್, ಸಹೋದರ-ಸಹೋದರಿಯರಾದ ಚಂದ್ರ, ವಿವೇಕ್, ವೇಣಿ, ಶಶಿಕಲಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page