ಆಟಿಬೇಡ ಕುಣಿಸಿ ಲಭಿಸಿದ ಮೊತ್ತ ಮನು ಪಣಿಕ್ಕರ್‌ರಿಂದ ಮುಖ್ಯಮಂತ್ರಿಯ ಪರಿಹಾರನಿಧಿಗೆ
ಕಾಸರಗೋಡು: ಆಟಿ ತಿಂಗಳಲ್ಲಿ ಊರಿನ ಆದಿ-ವ್ಯಾಧಿಗಳನ್ನು ತೊಲ ಗಿಸಲು ಮನೆಮನೆಗೆ ತಲುಪುವ ಆಟಿ ಬೇಡನನ್ನು ಕುಣಿಸಿ ಲಭಿಸಿದ ಹಣವನ್ನು ವಯನಾಡು ದುರಂತ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯ ವಿಕೋಪ ಪರಿಹಾರ ನಿಧಿಗೆ ಕುಂಬ್ಡಾಜೆ ಬೆದ್ರಡಿ ನಿವಾಸಿ, ದೈವಕಲಾವಿದ ಮನು ಪಣಿಕ್ಕರ್ ನೀಡಿದ್ದಾರೆ. ಯಕ್ಷಗಾನ, ಚೆಂಡೆ ನಿರ್ಮಾಣ, ಭೂತಾರಾಧನೆಯನ್ನು ನಡೆಸಿ ಇವರು ಕುಟುಂಬ ನಿರ್ವಹಿ ಸುತ್ತಿದ್ದು, ಇದರ ಮಧ್ಯೆ ಲಭಿಸಿದ ಮೊತ್ತವನ್ನು ಸಂತ್ರಸ್ತರಿಗೆ ನೀಡಿದ್ದಾರೆ. ಶಾಸಕರಾದ ಎಂ. ರಾಜಗೋಪಾಲನ್, ಸಿ.ಎಚ್. ಕುಂಞಂಬು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್‌ರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿಗೆ ೧೦ ಸಾವಿರ ರೂ.ವನ್ನು ಮನು ಪಣಿಕ್ಕರ್ ಹಸ್ತಾಂತರಿಸಿದರು.