ಮನೆಯಿಂದ ಚಿನ್ನಾಭರಣ, ಮೊಬೈಲ್ ಫೋನ್, ವಾಚ್ ಕಳವು  ಮನೆ ಕೆಲಸಕ್ಕೆ ಬಂದ ಇಬ್ಬರು ಯುವತಿಯರ ಬಂಧನ

ಕುಂಬಳೆ: ಮನೆ ಕೆಲಸಕ್ಕೆ ಬಂದು ಚಿನ್ನಾಭರಣ, ಹೆಚ್ಚು ಮೌಲ್ಯದ ಮೊಬೈಲ್ ಫೋನ್ ಹಾಗೂ ವಾಚ್ ಕಳವುಗೈದ ಇಬ್ಬರು ಯುವತಿಯರನ್ನು ಮನೆಯವರು ಕೈಯ್ಯಾರೆ ಸೆರೆ ಹಿಡಿದು ಕುಂಬಳೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಪೊಲೀಸರು ಯುವತಿಯರ ಬಂಧನ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಪತ್ತನಂತಿಟ್ಟ ನಿವಾಸಿಗಳೂ, ಈಗ ಹೇರೂರಿನಲ್ಲಿ ವಾಸಿಸುವ ಜಾನ್ಸಿ ಹಾಗೂ ಬ್ಲೆಸ್ಸಿ ಎಂಬಿಬ್ಬರು ಯುವತಿಯರು ಸೆರೆಗೀಡಾದವರೆಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಆಗಸ್ಟ್  24 ಹಾಗೂ 25ರಂದು ಹೇರೂರು ಬಿ ಸಿ ರೋಡ್‌ನ ಸೈನುದ್ದೀನ್ ಎಂಬವರ ಮನೆಯಿಂದ ಮೂರೂ ಮುಕ್ಕಾಲು ಪವನ್ ಚಿನ್ನಾಭರಣ, ಬೆಲೆಬಾಳುವ ಮೊಬೈಲ್ ಫೋನ್ ಹಾಗೂ ಸ್ಮಾರ್ಟ್ ವಾಚ್ ಕಳವಿಗೀಡಾಗಿತ್ತು. ಈ ಬಗ್ಗೆ ಅಂದು ಕುಂಬಳೆ ಪೊಲೀಸರಿಗೆ ಮನೆಯವರು ದೂರು ನೀಡಿದ್ದರು. ಈ ಸೊತ್ತುಗಳು ಕಳವಿಗೀಡಾದ ದಿನದಂದು ಈ ಮನೆಗೆ ಕೆಲಸಕ್ಕೆಂದು ಜಾನ್ಸಿ ಹಾಗೂ ಬ್ಲೆಸ್ಸಿ ಬಂದಿದ್ದರೆನ್ನಲಾಗಿದೆ. ಈ ಘಟನೆಯ ಒಂದು ತಿಂಗಳ ಹಿಂದೆಯೂ ಈ ಇಬ್ಬರು ಯುವತಿಯರು  ಮನೆಗೆ  ಕೆಲಸಕ್ಕೆ ಬಂದಿದ್ದ ಸಂದರ್ಭದಲ್ಲಿ ಒಂದು ಫೋನ್ ನಾಪತ್ತೆಯಾಗಿತ್ತು. ಆದರೆ ಈ ಬಗ್ಗೆ ದೂರು ನೀಡಿರಲಿಲ್ಲ.

ಎರಡನೇ ಬಾರಿಯೂ ಇದೇ ಯುವತಿಯರು ಕೆಲಸಕ್ಕೆ ಬಂದ ಸಂದರ್ಭದಲ್ಲಿ ಚಿನ್ನಾಭರಣ, ಮೊಬೈಲ್ ಫೋನ್ ಮೊದಲಾದವು ನಾಪತ್ತೆಯಾದ ಹಿನ್ನೆಲೆಯಲ್ಲಿ  ಈ ಯುವತಿಯರ ಮೇಲೆ ಸಂಶಯ ಹುಟ್ಟಿಕೊಂಡಿದೆ.

ಇದರಿಂದ ನಿನ್ನೆ  ಮತ್ತೆ ಇದೇ ಯುವತಿಯರನ್ನು ಮನೆ ಕೆಲಸಕ್ಕೆಂದು ಕರೆಸಿ ಅವರನ್ನು ಮನೆಯವರು ವಿಚಾರಿಸಿದಾಗ ಕಳವು ನಡೆಸಿರುವುದನ್ನು ಯುವತಿಯರು ಒಪ್ಪಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಇದರಿಂದ ಯುವತಿಯರನ್ನು ಮನೆಯವರು ಕುಂಬಳೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page