ಉದ್ಯೋಗ ಭರವಸೆಯೊಡ್ಡಿ ಹಲವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ ಸಚಿತಾ ರೈ ಕಣ್ಣೂರು ಸೆಂಟ್ರಲ್ ಜೈಲಿಗೆ
ಕಾಸರಗೋಡು: ಕೇಂದ್ರ, ರಾಜ್ಯ ಸರಕಾರಿ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸುವುದಾಗಿ ಭರವಸೆಯೊಡ್ಡಿ ಹಲವರಿಂದ ಲಕ್ಷಾಂತರ ರೂಪಾಯಿಗಳನ್ನು ಪಡೆದು ವಂಚಿಸಿದ ಅಧ್ಯಾಪಿಕೆ, ಡಿವೈಎಫ್ಐ ಮಾಜಿ ನೇತಾರೆ, ಶೇಣಿ ಬಲ್ತಕಲ್ಲುವಿನ ಸಚಿತಾ ರೈ (27)ಯನ್ನು ಪೊಲೀಸರು ಬಂಧಿಸಿದ್ದು, ಬಳಿಕ ಆಕೆಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಇದರಂತೆ ಸಚಿತಾ ರೈಯನ್ನು ಕಣ್ಣೂರು ಸೆಂಟ್ರಲ್ ಜೈಲಿಗೆ ಕೊಂಡೊಯ್ಯಲಾಗಿದೆ. ಈಕೆಯ ಜೊತೆಗೆ ಕೆಲವೇ ತಿಂಗಳು ಪ್ರಾಯದ ಮಗು ಕೂಡಾ ಇದೆ.
ನಿನ್ನೆ ಸಂಜೆ ಕಾಸರಗೋಡು ನ್ಯಾಯಾಲಯದಲ್ಲಿ ಹಾಜರಾಗಲು ಬರುತ್ತಿದ್ದಂತೆ ವಿದ್ಯಾನಗರದಲ್ಲಿ ಸಚಿತಾಳನ್ನು ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಸೆರೆ ಹಿಡಿದಿದೆ. ಬಳಿಕ ಕುಂಬಳೆ ಪೊಲೀಸರು ತಲುಪಿ ಸಚಿತಾಳನ್ನು ಕುಂಬಳೆ ಠಾಣೆಗೆ ಕರೆದೊಯ್ದರು. ಅನಂತರ ಪ್ರಕರಣದ ತನಿಖೆಯ ಹೊಣೆಗಾರಿಕೆಯುಳ್ಳ ಗ್ರೇಡ್ ಎಸ್ಐ ಗಣೇಶ್ ಆಕೆಯ ಬಂಧನ ದಾಖಲಿಸಿದರು. ಹಲವರಿಂದ ಪಡೆದುಕೊಂಡ ಒಟ್ಟು ೭೮ ಲಕ್ಷ ರೂಪಾಯಿಗಳನ್ನು ಕುಂಜಾರು ನಿವಾಸಿಯಾದ ಚಂದ್ರಶೇಖರ ಎಂಬ ವ್ಯಕ್ತಿಗೆ ಹಸ್ತಾಂತರಿಸಿರುವುದಾಗಿ ಸಚಿತಾ ರೈ ಹೇಳಿಕೆ ನೀಡಿದ್ದಾಳೆ. ಹಣ ನೀಡಿರುವುದರ ಪುರಾವೆಯಾಗಿ 78 ಲಕ್ಷ ರೂಪಾಯಿಗಳ ಚೆಕ್ ನೀಡಿರುವುದಾಗಿಯೂ ಅದು ತನ್ನ ಕೈವಶವಿದೆ ಎಂದು ಸಚಿತಾ ರೈ ತಿಳಿಸಿದ್ದಾಳೆ.
ಇನ್ಸ್ಪೆಕ್ಟರ್ ಕೆ.ಪಿ. ವಿನೋದ್ರ ನೇತೃತ್ವದಲ್ಲಿ ಪ್ರಾಥಮಿಕ ಹೇಳಿಕೆ ದಾಖಲಿಸಿಕೊಂಡ ಬಳಿಕ ರಾತ್ರಿ 11 ಗಂಟೆ ವೇಳೆ ಸಚಿತಾ ರೈಯನ್ನು ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ (ಪ್ರಥಮ)ರ ವಸತಿಯಲ್ಲಿ ಹಾಜರುಪಡಿಸಲಾಯಿತು. ಈ ವೇಳೆ ಸಚಿತಾಳಿಗೆ ರಿಮಾಂಡ್ ವಿಧಿಸಿ ಕಣ್ಣೂರು ಸೆಂಟ್ರಲ್ ಜೈಲಿಗೆ ಕಳುಹಿಸುವಂತೆ ಮೆಜಿಸ್ಟ್ರೇಟ್ ಆದೇಶಿಸಿದ್ದಾರೆ. ನಿನ್ನೆ ತಡರಾತ್ರಿಯಾದುದರಿಂದ ಸಚಿತಾಳನ್ನು ಕಾಞಂಗಾಡ್ನಲ್ಲಿರುವ ಜಿಲ್ಲಾ ಜೈಲಿಗೆ ಕಳುಹಿಸಲಾಯಿತು. ಇಂದು ಬೆಳಿಗ್ಗೆ 9 ಗಂಟೆ ವೇಳೆ ಆಕೆಯನ್ನು ಕಣ್ಣೂರು ಸೆಂಟ್ರಲ್ ಜೈಲಿಗೆ ಕೊಂಡೊ ಯ್ಯಲಾಯಿತು. ವಿವಿಧ ಪೊಲೀಸ್ ಠಾಣೆಗಳಲ್ಲಾಗಿ ಒಂದು ಡಜನ್ನಷ್ಟು ಕೇಸುಗಳು ಸಚಿತಾ ರೈ ವಿರುದ್ಧ ದಾಖಲಾಗಿದೆ.