ಕಣಿಪುರೇಶನ ಬ್ರಹ್ಮಕಲಶ,ವಾರ್ಷಿಕೋತ್ಸವ ಫೆ. ೧೬ರಿಂದ
ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಉತ್ಸವ ೨೦೨೪ ಫೆಬ್ರವರಿ ೧೬ರಿಂದ ೨೮ರ ವರೆಗೆ ನಡೆಯಲಿದೆಯೆಂದು ಜೀರ್ಣೋದ್ಧಾರ ಬ್ರಹ್ಮಕಲಶ ಸಮಿತಿ ಕುಂಬಳಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ. ಫೆಬ್ರವರಿ ೨೧ರಂದು ಮಧ್ಯಾಹ್ನ ೧೨.೨೧ರಿಂದ ೧.೪೨ರ ವರೆಗಿನ ಶುಭ ಮುಹೂರ್ತದಲ್ಲಿ ಪುನರ್ ಪ್ರತಿಷ್ಠೆ ನಡೆಯಲಿದೆ. ೨೪ರಂದು ಬ್ರಹ್ಮಕಲಶಾಭಿಷೇಕ ನಡೆಯಲಿದೆ. ೨೫ರಿಂದ ೨೯ರ ವರೆಗೆ ವಾರ್ಷಿಕೋತ್ಸವ, ೨೮ರಂದು ರಾತ್ರಿ ಬೆಡಿಸೇವೆ ನಡೆಯಲಿದೆ. ಸಾಮಾನ್ಯವಾಗಿ ಜನವರಿ ೧೪ರಿಂದ ೧೮ರ ವರೆಗೆ ಕ್ಷೇತ್ರದ ವಾರ್ಷಿಕ ಉತ್ಸವ ನಡೆಯುತ್ತಿದೆ. ಆದರೆ ಬ್ರಹ್ಮಕಲಶಾಭಿಷೇಕ ನಡೆಯಲಿರುವ ಹಿನ್ನೆಲೆಯಲ್ಲಿ ಕೆಲವು ತಾಂತ್ರಿಕತೆಯಿಂ ದಾಗಿ ಮುಂದಿನ ವಾರ್ಷಿಕೋತ್ಸವ ಫೆಬ್ರವರಿಯಲ್ಲಿ ನಡೆಯಲಿದೆಯೆಂದು ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಆದರೆ ಮುಂದಿನ ವರ್ಷಗಳಲ್ಲಿ ಎಂದಿನಂತೆ ಜನವರಿಯಲ್ಲಿಯೇ ಕ್ಷೇತ್ರ ದ ವಾರ್ಷಿಕ ಉತ್ಸವ ನಡೆಯಲಿದೆ.
ಮೂರು ಸಾವಿರ ವರ್ಷದ ಹಿಂದೆ ಕಣ್ವ ಮಹರ್ಷಿಯಿಂದ ಪ್ರತಿಷ್ಠಾಪಿಸಲ್ಪಟ್ಟದ್ದೆಂದು ನಂಬಿರುವ ಈ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳು ಈ ಹಿಂದೆ ೧೯೮೯ರಲ್ಲಿ ನಡೆದಿತ್ತು. ಮುಂದಿನ ಎಲ್ಲಾ ವಿಶೇಷ ಕಾರ್ಯಗಳಲ್ಲೂ ಭಕ್ತರು ಸಹಕರಿಸಬೇಕೆಂದು ಪದಾಧಿಕಾರಿಗಳು ವಿನಂತಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ರಘುನಾಥ ಪೈ, ಸ್ಮರಣ ಸಂಚಿಕೆ ಸಂಚಾಲಕ ಶಂನಾಡಿಗ, ಎಕ್ಸಿಕ್ಯೂಟಿವ್ ಆಫೀಸರ್ ಕೆ.ಪಿ. ಸುನಿಲ್ ಕುಮಾರ್, ಉಪಾಧ್ಯಕ್ಷರಾದ ಮಂಜುನಾಥ ಆಳ್ವ, ಸುಧಾಕರ ಕಾಮತ್, ಪ್ರಧಾನ ಕಾರ್ಯದರ್ಶಿ ಜಯ ಕುಮಾರ್, ಕಾರ್ಯದರ್ಶಿಗಳಾದ ವಿಕ್ರಂ ಪೈ, ದಾಮೋದರನ್, ಕೆ. ಶಂಕರ ಆಳ್ವ, ಎಕ್ಸಿಕ್ಯೂಟಿವ್ ಸದಸ್ಯ ಸಂಜೀವ ಅಮೀನ್ ಭಾಗವಹಿಸಿದ್ದರು.