ಹಲವರಿಂದ ಹಣ ಲಪಟಾಯಿಸಿದ ಡಿವೈಎಫ್‌ಐ ಮಾಜಿ ನೇತಾರೆ: ತನಿಖೆ ಸ್ತಬ್ದಗೊಂಡಿರುವುದಾಗಿ ಆರೋಪ
ಕಾಸರಗೋಡು: ಕೇಂದ್ರ, ರಾಜ್ಯ ಸರಕಾರಿ ಕಚೇರಿಗಳಲ್ಲಿ ಉದ್ಯೋಗ ದೊರಕಿಸಿಕೊಡುವುದಾಗಿ ರಾಜಕೀಯ ನೇತಾರೆಯೋರ್ವೆ ನೀಡಿದ ಭರವಸೆಯ ಹಿನ್ನೆಲೆಯಲ್ಲಿ ಲಕ್ಷಾಂತರ ರೂಪಾಯಿಗಳನ್ನು ನೀಡಿದ ಹಲವು ಮಂದಿಗೆ ಉದ್ಯೋಗವೂ ಇಲ್ಲ, ನೀಡಿದ ಹಣವೂ ಇಲ್ಲ ಎಂಬಂತಹ ಪರಿಸ್ಥಿತಿ ಉಂಟಾಗಿದೆ.
ಇದೇ ವೇಳೆ ತನಿಖೆಯೂ ಸ್ತಬ್ದಗೊಂಡಿರುವುದಾಗಿ ಆರೋಪ ಕೇಳಿಬಂದಿದೆ. ಹಲವರಿಂದ ಲಕ್ಷಾಂತರ ರೂಪಾಯಿಗಳನ್ನು ಪಡೆದು ವಂಚಿಸಿದ ಪ್ರಕರಣದಲ್ಲಿ ಮುಖ್ಯ ಆರೋಪಿಯಾದ ಡಿವೈಎಫ್‌ಐ ಮಾಜಿ ಜಿಲ್ಲಾ ಸಮಿತಿ ಸದಸ್ಯೆಯಾದ ಶೇಣಿ ಬಲ್ತಕಲ್ಲುವಿನ ಸಚಿತಾ ರೈ (27)ಯನ್ನು ಪೊಲೀಸರು ಬಂಧಿಸಿ ಮೂರು ವಾರಗಳಾದರೂ ತನಿಖೆ ಚುರುಕುಗೊಂಡಿಲ್ಲವೆಂದು ದೂರಲಾಗಿದೆ. ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಸಚಿತಾ ರೈಯನ್ನು ಕಸ್ಟಡಿಗೆ ಪಡೆದು ತನಿಖೆಗೊಳಪಡಿ ಸಲು ತನಿಖಾ ತಂಡ ಸಿದ್ಧವಾಗಿಲ್ಲ ವೆಂಬ ಆರೋಪವುಂಟಾಗಿದೆ.
ವಂಚನೆಗೆ ಸಂಬಂಧಿಸಿ ಸಚಿತಾ ರೈ ವಿರುದ್ಧ ಬದಿಯಡ್ಕ ಪೊಲೀಸ್ ಠಾಣೆಯಲ್ಲ್ಲಿ ೧೧, ಆದೂರಿನಲ್ಲಿ ೨, ಮಂಜೇಶ್ವರ, ಕಾಸರಗೋಡು, ಮೇಲ್ಪರಂಬ, ಕುಂಬಳೆ, ಅಂಬಲತ್ತರ, ಹಾಗೂ ದ.ಕ ಜಿಲ್ಲೆಯ ಉಪ್ಪಿನಂಗಡಿ ಠಾಣೆಯಲ್ಲಿ ತಲಾ ಒಂದೊಂದು ಕೇಸುಗಳು ದಾಖಲಾಗಿದೆ. ಇದುವರೆಗೆ ಲಭಿಸಿದ ದೂರಿನ ಪ್ರಕಾರ ಹಲವರಿಂದಾಗಿ ಸುಮಾರು ಒಂದೂವರೆ ಕೋಟಿ ರೂಪಾಯಿಗಳನ್ನು ಪಡೆದು ಸಚಿತಾ ರೈ ವಂಚಿಸಿದ್ದಾಳೆಂದು ಲೆಕ್ಕಹಾಕಲಾಗಿದೆಯೆಂದು ಪೊಲೀಸರು ತಿಳಿಸುತ್ತಿದ್ದಾರೆ.
ಹಣ ಕಳೆದುಕೊಂಡ ಹಲವರು ಪೊಲೀಸ್ ಠಾಣೆಗಳಿಗೆ ತಲುಪಿ ಆರೋಪ ವ್ಯಕ್ತಪಡಿಸುತ್ತಿದ್ದರೂ ಲಿಖಿತವಾಗಿ ದೂರು ನೀಡಲು ಹಿಂಜರಿಯುತ್ತಿರುವುದಾಗಿ ಹೇಳಲಾಗುತ್ತಿದೆ.
ಕೇರಳ, ಕರ್ನಾಟಕ ಹಾಗೂ ಕೇಂದ್ರ ಸರಕಾರದ ಕಚೇರಿಗಳು, ಬ್ಯಾಂಕ್‌ಗಳು ಹಾಗೂ ಕಾಸರಗೋಡಿನ ಕೇಂದ್ರೀಯ ವಿದ್ಯಾಲಯ, ಸಿಪಿಸಿಆರ್‌ಐ, ನೀರಾವರಿ ಇಲಾಖೆ, ಬ್ಯಾಂಕ್‌ಗಳು ಮೊದಲಾದೆಡೆಗಳಲ್ಲಿ ಉದ್ಯೋಗ ದೊರಕಿಸಿಕೊಡುವುದಾಗಿ ಭರವಸೆಯೊಡ್ಡಿ ಸಚಿತಾ ರೈ ಹಣ ಪಡೆದುಕೊಂಡಿರುವುದಾಗಿ ದೂರಲಾಗಿದೆ.
ಸಚಿತಾ ರೈ ಹಲವರಿಂದ ಪಡೆದುಕೊಂಡ ಹಣ ಏನಾಯಿತು, ಯಾರ ಕೈಯಲ್ಲಿದೆಯೆಂಬ ಪ್ರಶ್ನೆಗೂ ಉತ್ತರ ಲಭಿಸದಂತಾಗಿದೆ. ವಂಚನೆಗೀಡಾದವರು ಹಣವನ್ನು ಸಚಿತಾ ರೈಯ ಬ್ಯಾಂಕ್ ಖಾತೆಗೆ ನೀಡಿದ್ದರು. ಆದರೆ ಆ ಹಣ ಈಗ ಏನಾಯಿತು ಎಂದು ಯಾರಿಗೂ ತಿಳಿದಿಲ್ಲವೆಂದು ಹೇಳಲಾಗುತ್ತಿದೆ. ಆದ್ದರಿಂದ ಸಚಿತಾ ರೈ ಯನ್ನು ಕಸ್ಟಡಿಗೆ ತೆಗೆದು ತಪಾಸಣೆಗೊಳಪಡಿಸಿದರೆ ಈ ಪ್ರಶ್ನೆಗೆ ಉತ್ತರ ಲಭಿಸಲಿದೆಯೆಂದು ದೂರುಗಾರರು ಅಭಿಪ್ರಾಯಪಡುತ್ತಿದ್ದಾರೆ.