ಉಪ್ಪಳ: ಮೂಸೋಡಿ ಶಾಲಾ ಬಳಿಯಿಂದ ಮಣಿಮುಂಡದ ಸಮುದ್ರ ತೀರದ ಸುಮಾರು 2 ಕಿಲೋ ಮೀಟರ್ ರಸ್ತೆ ಹಲವು ವರ್ಷಗಳಿಂದ ಹದಗೆಟ್ಟು ಶೋಚನೀಯ ಸ್ಥಿತಿ ಯಲ್ಲಿದ್ದು, ದುರಸ್ತಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗದ ಹಿನ್ನೆಲೆ ಯಲ್ಲಿ ಕಗ್ಗಲ್ಲು ಸಾಗಾಟದ ಲಾರಿ ಯನ್ನು ಊರವರು ತಡೆದು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ರಸ್ತೆ ದುರಸ್ತಿಗೆ ವಿವಿಧ ಇಲಾಖೆಯ ಅಧಿ ಕಾರಿಗಳಿಗೆ ದೂರು ನೀಡಲಾದರೂ ಈ ಬಗ್ಗೆ ಗಮನ ಹರಿಸಿಲ್ಲವೆಂದು ಆರೋಪಿಸಲಾಗಿದೆ. ರಸ್ತೆ ಪೂರ್ತಿ ಕೆಟ್ಟು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದು, ಊರವರು ಸಮಸ್ಯೆಗೀಡಾಗುತ್ತಿದ್ದಾರೆ. ಇದೇ ಪರಿಸರದ ಹನುಮಾನ್ ನಗರದಲ್ಲಿ ಕಡಲ್ಕೊರೆತದಿಂದ ಕಾಂಕ್ರೀಟ್ ರಸ್ತೆ ಸಮುದ್ರ ಪಾಲಾಗಿದ್ದು, ಇದರ ದುರಸ್ತಿ ಗಾಗಿ ಕಗ್ಗಲ್ಲು ಸಾಗಿಸುತ್ತಿದ್ದ ವಾಹನ ಗಳನ್ನು ಮೂಸೋಡಿ ಶಾಲಾ ಬಳಿಯ ಹಾಗೂ ಶಾರದಾನಗರದ ಸ್ಥಳೀಯರು ಒಟ್ಟು ಸೇರಿ ತಡೆದು ನಿಲ್ಲಿಸಿ ಪ್ರತಿಭಟಿಸಿದರು. ರಸ್ತೆ ಮರು ಡಾಮಾರೀಕರಣಗೊಳಿಸಿದ ಬಳಿಕವೇ ಕಗ್ಗಲ್ಲು ಲಾರಿಗಳನ್ನು ಈ ರಸ್ತೆಯಲ್ಲಿ ಸಾಗಲು ಬಿಡುವುದಾಗಿ ಊರವರು ತಿಳಿಸಿದ್ದಾರೆ. ತಡೆದ ಲಾರಿಯನ್ನು ಹಿಂದಕ್ಕೆ ಕಳುಹಿಸಲಾಗಿದೆ. ಈ ವೇಳೆ ಸ್ಥಳಕ್ಕೆ ಹಾರ್ಬರ್ ಇಲಾಖೆ ಅಧಿಕಾರಿಗಳು ತಲುಪಿ ರಸ್ತೆ ದುರಸ್ಥಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆನ್ನಲಾಗಿದೆ.
