ಹೊಳೆಯಿಂದ ರಕ್ಷಿಸಲ್ಪಟ್ಟ ರಿಕ್ಷಾ ಚಾಲಕ ಆಸ್ಪತ್ರೆಯಲ್ಲಿ ಸಾವು
ಕಾಸರಗೋಡು: ಹೊಳೆಯಲ್ಲಿ ಬಿದ್ದು ಜೀವನ್ಮರಣ ಹೋರಾಟದಲ್ಲಿದ್ದ ಆಟೋ ರಿಕ್ಷಾ ಚಾಲಕನನ್ನು ನಾಗರಿಕರು ಮೇಲಕ್ಕೆತ್ತಿ ಆಸ್ಪತ್ರೆಯಲ್ಲಿ ದಾಖಲಿಸಿದರೂ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಹೊಸದುರ್ಗ ಇಟ್ಟುಮ್ಮಲ್ ನಿವಾಸಿ ರಮೇಶನ್ (45) ಸಾವನ್ನಪ್ಪಿದ ರಿಕ್ಷಾ ಚಾಲಕ. ಇವರು ನಿನ್ನೆ ಮಧ್ಯಾಹ್ನ ಚಿತ್ತಾರಿ ಸೇತುವೆಯ ಅಡಿಭಾಗದ ಹೊಳೆಗೆ ಬಿದ್ದಿದ್ದರು. ಅದನ್ನು ಕಂಡ ಪರಿಸರ ನಿವಾಸಿಗಳು ತಕ್ಷಣ ರಕ್ಷಿಸಿ ದೋಣಿಯಲ್ಲಿ ದಡಕ್ಕೆ ತಲುಪಿಸಿದ್ದರು. ನಂತರ ಹೊಸದುರ್ಗ ಪೊಲೀಸರ ಸಹಾಯದಿಂದ ಅವರನ್ನು ಕಾಞಂಗಾಡ್‌ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ರಮೇಶನ್ರ ಆಟೋ ರಿಕ್ಷಾ ಚಿತ್ತಾರಿ ಸೇತುವೆಯಲ್ಲಿ ನಿಲ್ಲಿಸಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇವರು ಹಿಂದೆ ಹೊಸದುರ್ಗದ ಸಂತೆಯಲ್ಲಿ ಕಮಿಶನ್ ಏಜೆಂಟರಾಗಿಯೂ ದುಡಿದಿದ್ದರು.
ಹೊಸದುರ್ಗ ಆವಿಕ್ಕೆರೆ ಗಾರ್ಡನ್ ವಳಪ್ಪಿನ ವಂಬನ್-ಬೇಬಿ ದಂಪತಿ ಪುತ್ರನಾಗಿರುವ ಮೃತ ರಮೇಶನ್, ಪತ್ನಿ ಬಿಂದು, ಮಕ್ಕಳಾದ ಅಮಿತೇಶ್, ಅನ್ವಿತ, ಸಹೋದರ-ಸಹೋದರಿಯರಾದ ಪ್ರಕಾಶನ್, ರಮ, ರಮಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.