ಯುವತಿ ನೇಣು ಬಿಗಿದು ಸಾವು: ವ್ಯಾಪಾರಿಯಾದ ಪತಿ ಬಂಧನ
ಬೋವಿಕ್ಕಾನ: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಪೊವ್ವಲ್ ಬೆಂಚ್ ಕೋರ್ಟ್ ಸಮೀಪ ನಿವಾಸಿ ಶೈಮ ಯಾನೆ ಅಲೀಮ (35) ಎಂಬಾಕೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡಿನಲ್ಲಿ ವ್ಯಾಪಾರಿಯಾಗಿರುವ ಜಾಫರ್ (40)ನನ್ನು ಬೇಕಲ ಡಿವೈಎಸ್ಪಿ ವಿ.ವಿ. ಮನೋಜ್ರ ನೇತೃತ್ವದಲ್ಲಿ ಬಂಧಿಸಲಾಗಿದೆ.
ಅಕ್ಟೋಬರ್ ೧೫ರಂದು ರಾತ್ರಿ ಶೈಮ ಮನೆಯೊಳಗಿನ ಬಾತ್ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಶೈಮ ಪತಿ ಹಾಗೂ ಹದಿನೈದು ವರ್ಷಕ್ಕಿಂತ ಕೆಳ ಪ್ರಾಯದ ಐವರು ಮಕ್ಕಳೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಶೈಮ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ತಕ್ಷಣ ಜಾಫರ್ ತಲೆಮ ರೆಸಿಕೊಂಡಿದ್ದನು.
ಶೈಮ ಕರ್ನಾಟಕದ ಸುಳ್ಯ ಜಯನಗರ ನಿವಾಸಿಯಾಗಿದ್ದಾರೆ. ಪತಿಯಿಂದ ನಿರಂತರ ಉಂಟಾಗುತ್ತಿದ್ದ ಶಾರೀರಿಕ, ಮಾನಸಿಕ ಕಿರುಕುಳವೇ ಆತ್ಮಹತ್ಯೆಗೆ ಕಾರಣವೆಂದು ಸಂಬಂಧಿಕರು ಆರೋಪಿಸಿದ್ದರು. ಶೈಮ ಆತ್ಮಹತ್ಯೆ ಕುರಿತು ಬರೆದಿಟ್ಟ ಪತ್ರವೂ ಲಭಿಸಿತ್ತು. ಪತ್ರ ಕಳೆದು ಹೋಗದಿರಲು ಭಾರೀ ಗುಪ್ತವಾಗಿಯೇ ಅದನ್ನು ಬಚ್ಚಿಟ್ಟಿದ್ದರು. ಪೊಲೀಸರು ಮೃತದೇಹದ ಮಹಜರು ನಡೆಸುತ್ತಿದ್ದಾಗ ಪತ್ರ ಲಭಿಸಿತ್ತು.
ಸಮಗ್ರ ತನಿಖೆಗೊಳಪಡಿಸಿದ ಬಳಿಕ ಜಾಫರ್ನನ್ನು ಇಂದು ನ್ಯಾಯಾ ಲಯದಲ್ಲಿ ಹಾಜರುಪಡಿಸುವುದಾಗಿ ಡಿವೈಎಸ್ಪಿ ತಿಳಿಸಿದ್ದಾರೆ.